ADVERTISEMENT

ಸೋನಮ್ ಕಪೂರ್ ದೆಹಲಿ ನಿವಾಸದಿಂದ ಆಭರಣ, ನಗದು ಕಳವು: ಆರೋಪಿಗಳ ಬಂಧನ

ಪಿಟಿಐ
Published 13 ಏಪ್ರಿಲ್ 2022, 11:32 IST
Last Updated 13 ಏಪ್ರಿಲ್ 2022, 11:32 IST
ಸೋನಮ್ ಕಪೂರ್
ಸೋನಮ್ ಕಪೂರ್   

ನವದೆಹಲಿ: ನಟಿ ಸೋನಮ್ ಕಪೂರ್ ಅವರ ದೆಹಲಿ ನಿವಾಸದಿಂದ ₹2.4 ಕೋಟಿ ಮೌಲ್ಯದ ಆಭರಣ ಮತ್ತು ನಗದು ಕಳವಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಅಮೃತ್ ಶೆರ್ಗಿಲ್ ಮಾರ್ಗ್‌ನಲ್ಲಿರುವ ನಿವಾಸದಿಂದ ಕಳವು ಮಾಡಿದ ಆರೋಪದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಮತ್ತು ಆಕೆಯ ಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಅಪರ್ಣಾ ರುಥ್ ವಿಲ್ಸನ್ ಅವರು ನಟಿಯ ಅತ್ತೆಯವರನ್ನು ನೋಡಿಕೊಳ್ಳುತ್ತಿದ್ದರು. ಅಪರ್ಣಾ ಪತಿ ನರೇಶ್ ಕುಮಾರ್ ಸಾಗರ್ ಸಹಕಾರ್‌ಪುರದ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಫೆಬ್ರುವರಿ 11ರಂದು ನಗದು, ಆಭರಣ ಕಳವಾಗಿತ್ತು. ಈ ಕುರಿತು ತುಘಲಕ್ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಫೆಬ್ರುವರಿ 23ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ಕಪೂರ್ ಹಾಗೂ ಅವರ ಪತಿ ಆನಂದ್ ಅಹುಜಾ ಅವರ ಮ್ಯಾನೇಜರ್ ದೂರು ನೀಡಿದ್ದರು. ಆನಂದ್ ಅಹುಜಾ ನಿವಾಸದಲ್ಲಿ ಸುಮಾರು 20 ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ದೆಹಲಿ ಪೊಲೀಸ್ ಅಪರಾಧ ದಳದ ತಂಡದ ವಿಶೇಷ ಸಿಬ್ಬಂದಿ ಮಂಗಳವಾರ ರಾತ್ರಿ ಸರಿತಾ ವಿಹಾರದ ಮೇಲೆ ದಾಳಿ ನಡೆಸಿ ವಿಲ್ಸನ್ ಮತ್ತು ಆಕೆಯ ಪತಿಯನ್ನು ಬಂಧಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳವಾಗಿರುವ ನಗದು ಮತ್ತು ಆಭರಣವನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ಅಮೃತಾ ಶೆರ್ಗಿಲ್ ಮಾರ್ಗ್‌ನಲ್ಲಿರುವ ನಿವಾಸದಲ್ಲಿ ಕೆಲಸ ಮಾಡುತ್ತಿರುವ ಎಲ್ಲರನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.