ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ‘ಬ್ರ್ಯಾಟ್’ ಚಿತ್ರದ ‘ನಾನೇ ನೀನಂತೆ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಶಶಾಂಕ್ ನಿರ್ದೇಶನದ ಚಿತ್ರವಿದು. ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ.
ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಹಾಡಿಗೆ ಸಿದ್ ಶ್ರೀರಾಮ್ ಧ್ವನಿಯಾಗಿದ್ದಾರೆ. ಶಶಾಂಕ್ ಅವರದ್ದೇ ಸಾಹಿತ್ಯವಿದೆ. ‘ಯಾವುದೇ ಪ್ರಕ್ರಿಯೆಯಾದರೂ ಮೊದಲು ನಮಗೆ ಇಷ್ಟವಾಗಬೇಕು ಎಂಬುದು ನನ್ನ ವಾದ. ಸಿನಿಮಾ ಕೂಡ ಅದೇ ರೀತಿ. ನಮಗೆ ಇಷ್ಟವಾದರೆ, ಬೇರೆಯವರಿಗೆ ಇಷ್ಟವಾಗುತ್ತದೆ. ನಮ್ಮಿಷ್ಟಕ್ಕೆ ನಾವು ಮಾಡಿದಾಗ ಅದೇ ರೀತಿಯ ಮನಸ್ಥಿತಿ ಇರುವವರು ಇಷ್ಟಪಡುತ್ತಾರೆ ಎಂಬುದು ನನ್ನ ನಂಬಿಕೆ. ನನ್ನ ವೃತ್ತಿ ಜೀವನದಲ್ಲಿ ಈ ಹಾಡಿಗೆ ತೆಗೆದುಕೊಂಡಷ್ಟು ಸಮಯವನ್ನು ಬೇರೆ ಹಾಡುಗಳಿಗೆ ತೆಗೆದುಕೊಂಡಿರಲಿಲ್ಲ. ಈ ಹಾಡಿಗಾಗಿ ಆರು ತಿಂಗಳು ಕೆಲಸ ಮಾಡಿದ್ದೇವೆ. ಅರ್ಜುನ್ ಜನ್ಯ ನನಗೆ ಚಿತ್ರಗಳಿಗೆ ಸಾಕಷ್ಟು ಜನಪ್ರಿಯ ಹಾಡುಗಳನ್ನು ನೀಡಿದವರು. ತಕ್ಷಣ ಟ್ಯೂನ್ ಕೊಡುತ್ತಾರೆ. ಆದರೆ ಈ ಹಾಡಿಗಾಗಿ 15 ಟ್ಯೂನ್‌ಗಳನ್ನು ನೀಡಿದ್ದರು. ಅದರಲ್ಲಿ ಅಂತಿಮವಾಗಿದ್ದು ಈಗ ನಾವೆಲ್ಲ ಕೇಳುತ್ತಿರುವ ಈ ಹಾಡು. ಈ ಹಾಡಿಗೆ ಆಗಿರುವ ಖರ್ಚು ನೋಡಿ ನಾನೇ ಗಾಬರಿಯಾದೆ. ಈ ಬಜೆಟ್‌ನಲ್ಲಿ ಒಂದು ಸಿನಿಮಾ ಮಾಡಬಹುದಿತ್ತು. ನಾನು ಮತ್ತು ಅರ್ಜುನ್ ಜನ್ಯ, ನಮ್ಮ ಹಿಂದಿನ ಹಾಡುಗಳ ದಾಖಲೆಯನ್ನು ಈ ಹಾಡು ಮುರಿಯಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಗುಣಮಟ್ಟದಿಂದಾಗಿ ಬಜೆಟ್ ಹೆಚ್ಚಾಯಿತು. ಈ ಹಾಡನ್ನು ಐದು ದಿನ ಚಿತ್ರೀಕರಣ ಮಾಡಿದ್ದೇವೆ. ಇಬ್ಬರ ಪ್ರೀತಿಯ ಪಯಣ ಇದರಲ್ಲಿದೆ. ಚಿತ್ರದಲ್ಲಿ ನಾಯಕ–ನಾಯಕಿ ಸುಂದರವಾಗಿ ಕಾಣಿಸಬೇಕು ಎಂಬುದು ನನ್ನ ಆಲೋಚನೆ. ಈ ಜೋಡಿ ಹಾಗೆ ಕಾಣಿಸಿದೆ ಅಂದುಕೊಂಡಿರುವೆ’ ಎಂದು ಹಾಡಿನ ಕುರಿತು ಮಾಹಿತಿ ನೀಡಿದರು ಶಶಾಂಕ್.
‘ಶಶಾಂಕ್ ಅವರು ಹೊಸ ಹೊಸ ಪಾತ್ರ ನೀಡುತ್ತಾರೆ. ಈ ಸಲ ಬ್ರಾಟ್ ಪಾತ್ರ ನೀಡಿದ್ದಾರೆ. ಅದೇ ರೀತಿ ಹೇರ್‌ಸ್ಟೈಲ್ ಕೂಡ ನನಗಿದೆ. ನನ್ನ ಸ್ವಭಾವಕ್ಕೆ ತದ್ವಿರುದ್ಧವಾದ ಪಾತ್ರವಿದು. ಆದರೆ ನಿರ್ದೇಶಕರು ಬಹಳ ನಂಬಿಕೆಯಿಂದ ಈ ರೀತಿ ಪಾತ್ರ ಬರೆದಿದ್ದಾರೆ. ಕ್ರಿಸ್ಟಿಯಾಗಿ ಕಾಣಿಸಿಕೊಂಡಿರುವೆ. ಈ ಹಾಡು ತುಂಬ ಸುಂದರವಾಗಿದೆ. ದೃಶ್ಯಗಳು ಕೂಡ ಸುಂದರವಾಗಿವೆ. ತುಂಬ ಶ್ರೀಮಂತವಾಗಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ನನ್ನ ವೇಷಭೂಷಣಗಳಿಗೂ ನಿರ್ದೇಶಕರು ಹೆಚ್ಚು ಆದ್ಯತೆ ನೀಡಿದ್ದಾರೆ. ನಿರ್ಮಾಪಕರು ತುಂಬ ಶ್ರದ್ಧೆಯಿಂದ ಚಿತ್ರ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಸಿನಿಮಾ ಮೂಡಿಬರುತ್ತಿದೆ. ಚಿತ್ರದಲ್ಲಿ ಇನ್ನೊಂದು ಹಾಡಿದೆ. ಅದು ನನ್ನ ಮಗಳಿಗೆ ಇಷ್ಟವಾಗಿದೆ. ಇದು ಈ ವರ್ಷದ ಅದ್ಭುತವಾದ ಚಿತ್ರವಾಗಲಿದೆ ಎಂಬ ನಂಬಿಕೆ ಇದೆ’ ಎಂದರು ಡಾರ್ಲಿಂಗ್ ಕೃಷ್ಣ.
ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಮೂಡಿಬರುತ್ತಿದೆ. ‘ಫಸ್ಟ್ ರ‍್ಯಾಂಕ್ ರಾಜು’ ಸಿನಿಮಾ ನಿರ್ಮಿಸಿದ್ದ ಮಂಜುನಾಥ್ ಕಂದಕೂರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮನೀಶಾ ಕಂದಕೂರ್ ಚಿತ್ರದ ನಾಯಕಿ.
‘ಮನೀಶಾ ಎಂಬ ಪಾತ್ರ ಮಾಡಿದ್ದೇನೆ. ಸರಳವಾದ ಮಿಡಲ್‌ಕ್ಲಾಸ್ ಹುಡುಗಿ ಪಾತ್ರ. ಜಾಸ್ತಿ ಮಾತಾಡುವುದಿಲ್ಲ. ತುಂಬ ಭಿನ್ನವಾದ ಪಾತ್ರ. ನಟನೆ ವರ್ಕ್‌ಶಾಪ್ ಮಾಡಿದ್ದೆ. ಹೈದ್ರಾಬಾದ್‌ನಲ್ಲಿಯೂ ನಟನೆ ತರಬೇತಿ ಪಡೆದಿರುವೆ. ಜತೆಗೆ ಸ್ವಂತವಾಗಿ ಕೂಡ ನಟನೆ ಕಲಿತಿರುವೆ. ಈಗ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು ಮನೀಶಾ.
ಅಭಿಷೇಕ್ ಕಲ್ಲತ್ತಿ ಛಾಯಾಚಿತ್ರಗ್ರಹಣವಿದೆ. ಚಿಕ್ಕಮಗಳೂರು, ಕಳಸ ಮುಂತಾದೆಡೆ ಚಿತ್ರೀಕರಣಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.