ADVERTISEMENT

‘ಕೌಸಲ್ಯಾ ಸುಪ್ರಜಾ ರಾಮ’ನಾಗಿ ಡಾರ್ಲಿಂಗ್ ಕೃಷ್ಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2022, 6:37 IST
Last Updated 17 ಅಕ್ಟೋಬರ್ 2022, 6:37 IST
ಶಶಾಂಕ್‌, ಡಾರ್ಲಿಂಗ್‌ ಕೃಷ್ಣ
ಶಶಾಂಕ್‌, ಡಾರ್ಲಿಂಗ್‌ ಕೃಷ್ಣ   

ಕನ್ನಡದಲ್ಲಿ ವಿಭಿನ್ನ ಶೀರ್ಷಿಕೆಯ ಚಿತ್ರಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಅದಕ್ಕೀಗ ಡಾರ್ಲಿಂಗ್‌ ಕೃಷ್ಣ ಅವರ ‘ಕೌಸಲ್ಯಾ ಸುಪ್ರಜಾ ರಾಮ’ ಹೊಸ ಸೇರ್ಪಡೆ.

ಸದಭಿರುಚಿ ಚಿತ್ರಗಳಿಗೆ ಜನಪ್ರಿಯವಾಗಿರುವ ‘ಮೊಗ್ಗಿನ ಮನಸು’ ಶಶಾಂಕ್ ಈ ಚಿತ್ರದ ನಿರ್ದೇಶಕರು.
ಇತ್ತೀಚಿಗೆ ಬಿಡುಗಡೆಗೊಂಡ ಈ ಶೀರ್ಷಿಕೆಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ವಿಭಿನ್ನ ವಿಡಿಯೊ ಮೂಲಕ ಶಶಾಂಕ್ ತಮ್ಮ ಚಿತ್ರದ ಟೈಟಲ್ ಬಿಡುಗಡೆ ಮಾಡಿರುವುದು ವಿಶೇಷ.

‘ಕೌಸಲ್ಯಾ ಸುಪ್ರಜಾ ರಾಮ’ ನಾವು ದಿನ ಬೆಳಗ್ಗೆ ಕೇಳುವ ಸುಮಧುರ ಸುಪ್ರಭಾತದ ಮೊದಲ ಸಾಲು. ಇದೊಂದು ತಾಯಿ ಮಗನ ಭಾವನಾತ್ಮಕ ಸನ್ನಿವೇಶಗಳನ್ನೊಳಗೊಂಡಿರುವ ಚಿತ್ರ. ಹಾಗಂತ ನಮ್ಮ ಚಿತ್ರದಲ್ಲಿ ಮನೋರಂಜನೆಗೆ ಕೊರತೆಯಿಲ್ಲ. ಉತ್ತಮ ಮನೋರಂಜನೆ ಹಾಗೂ ಭಾವನೆ ಇರುವ, ಕುಟುಂಬ ಸಮೇತ ನೋಡಬಹುದಾದ ಸುಂದರ ಕೌಟುಂಬಿಕ ಚಿತ್ರ ಎನ್ನುತ್ತಾರೆ ಶಶಾಂಕ್‌.

ADVERTISEMENT

ಡಾರ್ಲಿಂಗ್ ಕೃಷ್ಣ ಅವರ ತಾಯಿ - ತಂದೆ ಪಾತ್ರದಲ್ಲಿ ಸುಧಾ ಬೆಳವಾಡಿ, ರಂಗಾಯಣ ರಘು ಅಭಿನಯಿಸುತ್ತಿದ್ದಾರೆ. ಅಚ್ಯುತ್‌ಕುಮಾರ್, ಗಿರಿರಾಜ್ ಸಹ ತಾರಾಬಳಗದಲ್ಲಿದ್ದಾರೆ. ಇಬ್ಬರು ನಾಯಕಿಯರಿದ್ದು, ಅದರಲ್ಲಿ ಒಬ್ಬರು ಹೊಸಬರು ಎನ್ನುತ್ತಿದೆ ಚಿತ್ರತಂಡ.

ಈಗಾಗಲೇ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಐದು ಹಾಡುಗಳಿದೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಸುಜ್ಞಾನ್ ಈ ಚಿತ್ರದ ಛಾಯಾಗ್ರಾಹಕರು. ಶಶಾಂಕ್ ಸಿನಿಮಾಸ್ ಹಾಗೂ ಬಿ.ಸಿ.ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹೌಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಸದಭಿರುಚಿ ಚಿತ್ರಗಳ ನಿರ್ದೇಶಕ ಶಶಾಂಕ್ ಅವರ ನಿರ್ದೇಶನದಲ್ಲಿ ನಟಿಸಬೇಕೆಂಬ ಆಸೆ ಈಗ ಈಡೇರಿದೆ. ‘ಲವ್ ಮಾಕ್ಟೇಲ್’, ‘ಲಕ್ಕಿ ಮ್ಯಾನ್’ ಸೇರಿದಂತೆ ನನ್ನ ಅನೇಕ ಚಿತ್ರಗಳ ಶೀರ್ಷಿಕೆ ಇಂಗ್ಲಿಷ್ ನಲ್ಲಿದೆ‌. ಈಗ ಅಚ್ಚ ಕನ್ನಡದ ಶೀರ್ಷಿಕೆ ಸಿಕ್ಕಿದೆ. ಕಥೆ ಹಾಗೂ ನನ್ನ ಪಾತ್ರ ತುಂಬಾ ಚೆನ್ನಾಗಿದೆ ಎಂದು ನಾಯಕ ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.