ADVERTISEMENT

ದರ್ಶನ್ ಅಭಿಮಾನಿಗಳಿಂದ ಬೆದರಿಕೆ: ದೂರು ನೀಡಿದ ನಟ ಪ್ರಥಮ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 13:01 IST
Last Updated 29 ಜುಲೈ 2025, 13:01 IST
<div class="paragraphs"><p>ಪ್ರಥಮ್‌</p></div>

ಪ್ರಥಮ್‌

   

ಬೆಂಗಳೂರು: ನಟ ದರ್ಶನ್ ಅವರ ಅಭಿಮಾನಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟ ಪ್ರಥಮ್‌ ಸಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‌ಪಿ ಸಿ.ಕೆ.ಬಾಬಾ ಅವರಿಗೆ ಮಂಗಳವಾರ ಲಿಖಿತ ದೂರು ನೀಡಿದರು.

ದೂರು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಪ್ರಥಮ್, ‘ನನಗೆ ದರ್ಶನ್‌ ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ. ನನಗೆ ಏನಾದರೂ ಆದರೆ ದರ್ಶನ್ ಅವರೇ ಕಾರಣ. ದರ್ಶನ್ ಅವರಿಗೆ ಸಾಮಾನ್ಯ ಜ್ಞಾನ ಇಲ್ವಾ? ಅವರು ತಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಬೇಕು’ ಎಂದು ಕೋರಿದರು.

ADVERTISEMENT

‘ಸಾಕಷ್ಟು ಬಾರಿ ಬೆದರಿಕೆ ಬಂದಿದೆ. ಸದ್ಯಕ್ಕೆ ಬೆಂಗಳೂರು ಬಿಟ್ಟು ಸ್ವಂತ ಊರಾದ ಚಾಮರಾಜನಗರಕ್ಕೆ ತೆರಳುತ್ತಿದ್ದೇನೆ’ ಎಂದು ಹೇಳಿದರು.

ದೂರಿನಲ್ಲಿ ಏನಿದೆ?:

‘ಸಿನಿಮಾ ತಂಡವೊಂದರ ಆಹ್ವಾನದ ಮೇರೆಗೆ ಜುಲೈ 22ರಂದು ದೊಡ್ಡಬಳ್ಳಾಪುರದ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿದ್ದೆ. ಪೂಜೆ ಮುಗಿಸಿಕೊಂಡು ವಾಪಸ್ ಬರುವಾಗ ಯಶಸ್ವಿ, ಬೇಕರಿ ರಘು ಮತ್ತಿತರರು ನನ್ನ ಕಾರನ್ನು ಸುತ್ತುವರಿದು, ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ನಮ್ಮ ಬಾಸ್‌ ಬಗ್ಗೆ ಮಾತನಾಡುತ್ತೀಯಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಡ್ರಾಗರ್‌ ಹಾಗೂ ಚಾಕು ತೋರಿಸಿ ಚುಚ್ಚಲು ಯತ್ನಿಸಿದ್ದರು. ಬಹಳ ಉಪಾಯದಿಂದ ನಾನು ಪ್ರಾಣ ಉಳಿಸಿಕೊಂಡು ಬಂದೆ’ ಎಂದು ಪ್ರಥಮ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ದರ್ಶನ್‌ ಅವರ ಅಧಿಕೃತ ಫ್ಯಾನ್‌ ಪೇಜ್‌ಗಳಾದ ಡಿ ಡೈನಾಸ್ಟಿ, ಡಿ ಕಿಂಗ್‌ಡಮ್‌, ಡಿ ಯೂನಿವರ್ಸ್‌ ಹಾಗೂ ಡೆವಿಲ್‌ ಕಿಂಗ್‌ಡಮ್‌ ಜತೆಗೆ 500ಕ್ಕೂ ಹೆಚ್ಚು ಪೇಜ್‌ಗಳಿಂದ ತೇಜೋವಧೆ ಮಾಡಲಾಗುತ್ತಿದೆ’ ಎಂದು ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.