ADVERTISEMENT

ಕೆಜಿಎಫ್‌ನ ರಾಕಿ ಬಾಯ್‌ ಆದ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್‌ ವಾರ್ನರ್‌!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜನವರಿ 2021, 10:16 IST
Last Updated 21 ಜನವರಿ 2021, 10:16 IST
ಕೆ.ಜಿ.ಎಫ್‌ ಚಿತ್ರದ ಸನ್ನಿವೇಶ
ಕೆ.ಜಿ.ಎಫ್‌ ಚಿತ್ರದ ಸನ್ನಿವೇಶ    

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಕೆಜಿಎಫ್‌-2ನರಾಕಿ ಬಾಯ್‌ ಪಾತ್ರದಲ್ಲಿ ಕಾಣಿಸಿಕೊಂಡರೆ ಹೇಗಿರುತ್ತದೆ...?

ಅಂಥದ್ದೊಂದು ದೃಶ್ಯವನ್ನು ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಹಂಚಿಕೊಂಡಿದ್ದಾರೆ. ಕೆಜಿಎಫ್-2‌ ಚಿತ್ರದ, ಅತ್ಯಂತ ಜನಪ್ರಿಯ ಹಾಗೂ ವಿವಾದಿತ ದೃಶ್ಯವೊಂದಕ್ಕೆ ರೀಫೇಸ್‌ ಆಪ್‌ (REFACE APP) ಮೂಲಕ ಡೇವಿಡ್‌ ವಾರ್ನರ್‌ ಅವರ ಮುಖವನ್ನು ಹೊಂದಿಸಲಾಗಿದೆ.

ರೀಫೇಸ್‌ ಆಪ್‌ ಮೂಲಕ ಎಡಿಟ್‌ ಮಾಡಲಾದ ವಿಡಿಯೊವನ್ನು ವಾರ್ನರ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 'ಇದನ್ನು ನನಗೆ ಕಳುಹಿಸಿಕೊಡಲಾಯಿತು. ನಾನಿದನ್ನು ಶೇರ್‌ ಮಾಡುವ ಭರವಸೆ ನೀಡಿದ್ದೆ,' ಎಂದು ಅವರು ವಿಡಿಯೊದ ಜೊತೆಗೆ ಬರೆದುಕೊಂಡಿದ್ದಾರೆ.

ADVERTISEMENT

ಇದೇ ಮೊದಲಲ್ಲ

ಡೇವಿಡ್‌ ವಾರ್ನರ್‌ ಹೀಗೆ ಚಿತ್ರದ ದೃಶ್ಯಗಳಲ್ಲಿ ತಮ್ಮನ್ನು ಹೊಂದಿಸಿಕೊಂಡಿದ್ದು ಇದೇ ಮೊದಲಲ್ಲ. ತೆಲುಗು, ಬಾಲಿವುಡ್‌ನ ಹಲವು ಚಿತ್ರಗಳ ದೃಶ್ಯಗಳಲ್ಲಿ ಅವರು ಹೀಗೆ ಕಾಣಿಸಿಕೊಂಡಿದ್ದಾರೆ. ಅವುಗಳನ್ನು ಸಾಮಾಜಿಕ ತಾಣಗಳಲ್ಲಿ ಶೇರ್‌ ಮಾಡಿದ್ದಾರೆ. ರಜನಿಕಾಂತ್‌, ಪ್ರಬಾಸ್‌, ಹೃತಿಕ್‌ ರೋಷನ್‌, ವಿರಾಟ್‌ ಕೊಹ್ಲಿ ಅವರ ಪಾತ್ರಗಳಲ್ಲೂ ಅವರು ತಮ್ಮನ್ನು ಹೊಂದಿಸಿದ್ದಾರೆ.

ವಿವಾದಿತ ದೃಶ್ಯ

ಕೆಜಿಎಫ್-2‌ ಚಿತ್ರತಂಡವು ಇತ್ತೀಚೆಗೆ ಟೀಸರ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ನಟ ಯಶ್‌ ಅವರು ಕಾದು ಕೆಂಪಗಾದ ಬಂದೂಕಿನ ನಳಿಕೆಯಿಂದ ಸಿಗರೇಟಿಗೆ ಕಿಡಿ ಹೊತ್ತಿಸಿಕೊಳ್ಳುವ ಸನ್ನಿವೇಶವಿದೆ. ಈ ಸನ್ನಿವೇಶದ ಬಗ್ಗೆ ಈಗಾಗಲೇ ರಾಜ್ಯ ಆರೋಗ್ಯ ಇಲಾಖೆ ಆಕ್ಷೇಪವನ್ನೂ ಎತ್ತಿದೆ.

‘ಇತ್ತೀಚೆಗೆ ಬಿಡುಗಡೆಯಾದ ಕೆಜಿಎಫ್–2 ಚಿತ್ರದ ಟೀಸರ್ ಹಾಗೂ ಪೋಸ್ಟರ್‌ನಲ್ಲಿ ಸಿಗರೇಟ್ ಸೇದುವುದನ್ನು ಪ್ರಚೋದಿಸಿದ್ದೀರಿ. ಇದು ತಂಬಾಕು ಉತ್ಪನ್ನಗಳ ಕಾಯ್ದೆಯ ಉಲ್ಲಂಘನೆಯಲ್ಲವೇ’ ಎಂದು ಪ್ರಶ್ನಿಸಿರುವ ಆರೋಗ್ಯ ಇಲಾಖೆ, ಚಿತ್ರ ನಟ ಯಶ್‌ ಗೆ ನೋಟಿಸ್ ನೀಡಿದೆ.

'ಟೀಸರ್‌ನಲ್ಲಿ ತಾವು ಸಿಗರೇಟ್ ಸೇವನೆ ಮಾಡುವ ದೃಶ್ಯವಿದೆ. ಇದು ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ 2003ರ ಸೆಕ್ಷನ್‌ 5 ಹಾಗೂ ನಿಬಂಧನೆಗಳ ಉಲ್ಲಂಘನೆಯಾಗಿರುತ್ತದೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ತಾವು, ಸಾಮಾಜಿಕ ಕಳಕಳಿಯನ್ನು ಹೊಂದಿರುತ್ತಿರಿ. ಸಿಗರೇಟ್‌ ಸೇವನೆಯಂತಹ ದೃಶ್ಯದಲ್ಲಿ ನೀವು ಕಾಣಿಸಿಕೊಂಡಲ್ಲಿ ಅಭಿಮಾನಿಗಳು ಅದನ್ನು ಅನುಕರಿಸುತ್ತಾರೆ. ಇದರಿಂದ ಅವರು ಕ್ಯಾನ್ಸರ್‌ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಒಳಪಡುವ ಸಾಧ್ಯತೆ ಇರುತ್ತದೆ,' ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸಿಗರೇಟ್ ಸೇವನೆಯಂತಹ ದೃಶ್ಯಗಳನ್ನು ತೆರವುಗೊಳಿಸಲು ತಕ್ಷಣವೇ ಚಿತ್ರ ತಂಡದವರಿಗೆ ಸೂಚನೆ ನೀಡಿ, ಆರೋಗ್ಯವಂತ ಸಮಾಜ ಕಟ್ಟಲು ಇಲಾಖೆಯ ಜತಗೆ ಸಹಕರಿಸಿ ಎಂದು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.