L&T ಅಧ್ಯಕ್ಷರ ಹೇಳಿಕೆಗೆ ಅಸಮಾಧಾನ ಹೊರಹಾಕಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ನವದೆಹಲಿ: ‘ಮನೆಯಲ್ಲಿ ಕುಳಿತು ಎಷ್ಟು ಹೊತ್ತು ಹೆಂಡತಿಯ ಮುಖ ನೋಡಿಕೊಡು ಇರುತ್ತೀರಿ. ವಾರದಲ್ಲಿ 90 ಗಂಟೆ ಕೆಲಸ ಮಾಡಿ. ಶ್ರಮವಹಿಸಿ, ದುಡಿಯಲು ಭಾನುವಾರದ ರಜೆಯನ್ನೂ ತ್ಯಜಿಸಿ’ ಎಂದು ಎಲ್ ಆ್ಯಂಡ್ ಟಿ ಕಂಪನಿ ಮುಖ್ಯಸ್ಥ ಎಸ್.ಎನ್. ಸುಬ್ರಹ್ಮಣ್ಯನ್ ಹೇಳಿಕೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಕ್ರೋಶ ಹೊರಹಾಕಿದ್ದಾರೆ.
ಪತ್ರಕರ್ತೆ ಫಾಯೆ ಡಿಸೊಜಾ ಅವರ ಹೇಳಿಕೆಯ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು ‘ಇಷ್ಟು ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿಗಳು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.’ ಎಂದು ಬರೆದುಕೊಂಡು Mental Health Matters ಎಂಬ ಹ್ಯಾಷ್‌ಟ್ಯಾಗ್ ಬಳಸಿದ್ದಾರೆ.
ಎಲ್ &ಟಿ ಕಂಪನಿಯ ಹೇಳಿಕೆಯನ್ನು ಹಂಚಿಕೊಂಡು ‘ಅವರು ಇನ್ನಷ್ಟು ಕೆಟ್ಟದಾಗಿ ಮಾಡಿದ್ದಾರೆ’ ಎಂದು ದೀಪಿಕಾ ಅಸಹನೆ ಹೊರಹಾಕಿದ್ದಾರೆ.
ಸದ್ಯ ಸುಬ್ರಹ್ಮಣ್ಯನ್ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಇನ್ಫಿ ನಾರಾಯಾಣ ಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಹೇಳಿಕೆ ಪರ ವಿರೋಧ ಹೇಳಿಕೆಗಳಿಗೆ ಎಡೆ ಮಾಡಿಕೊಟ್ಟಿತ್ತು.
‘ನಿಮ್ಮಿಂದ ಭಾನುವಾರ ಕೂಡ ಕೆಲಸ ಮಾಡಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ನನಗೆ ವಿಷಾದವಾಗುತ್ತಿದೆ. ನಾನು ಭಾನುವಾರವೂ ಕೆಲಸ ಮಾಡುತ್ತೇನೆ. ಅಂದು ಕೂಡ ನಿಮ್ಮಿಂದ ಕೆಲಸ ಮಾಡಿಸಲು ನನ್ನಿಂದ ಸಾಧ್ಯವಾದರೆ ನಾನು ಹೆಚ್ಚು ಸಂತೋಷಪಡುತ್ತೇನೆ. ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ. ಎಷ್ಟು ಹೊತ್ತು ಹೆಂಡತಿಯ ಮುಖ ನೋಡುತ್ತೀರಿ. ಆಕೆ ಕೂಡ ಎಷ್ಟು ಹೊತ್ತು ನಿಮ್ಮ ಮುಖ ನೋಡಿಕೊಂಡು ಇರುತ್ತಾರೆ. ಹಾಗಾಗಿ, ಕಚೇರಿಗೆ ಬಂದು ಕೆಲಸ ಮಾಡಿ’ ಎಂದು ಸುಬ್ರಹ್ಮಣ್ಯನ್ ನೀಡಿರು ಹೇಳಿಕೆಯ ವಿಡಿಯೊದಲ್ಲಿ ಸುದ್ದಿ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.