
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಸಿದ್ದಿ ಜನಾಂಗದ ಸಂಸ್ಕೃತಿ, ಆಚಾರ, ವಿಚಾರಗಳ ಕುರಿತಾದ ಕಥೆಯನ್ನು ಹೊಂದಿರುವ ‘ದೇವಸಸ್ಯ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಕಾರ್ತೀಕ್ ಭಟ್ ನಿರ್ದೇಶನದ ಚಿತ್ರ ಕನ್ನಡ, ತೆಲುಗು, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ.
‘1995ರ ಕಾಲಘಟ್ಟದಲ್ಲಿ ನಡೆಯುವ ನಮ್ಮ ಮಣ್ಣಿನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಊರಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿದ್ದ ಸಿದ್ದಿ ಸಮುದಾಯದ ಯುವಕ ಸೆಲ್ವಿನ್ ದೇಸಾಯಿ ಈ ಚಿತ್ರದ ಪ್ರಮುಖ ಪಾತ್ರಧಾರಿ. ಒಂದು ವಿಶಿಷ್ಟ ಗಿಡದ ಸುತ್ತ ಕಥೆ ಸಾಗುತ್ತದೆ. ಶಿರಸಿ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ‍್ರಾರಂಭಗೊಂಡಿದ್ದು, ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕ.
ರಂಗಭೂಮಿ ಕಲಾವಿದ ಆಹಾನ್ ಗೌಡಗೆ ಬಿಂಬಿಕಾ ಜೆ.ರಾವ್ ಜೋಡಿಯಾಗಿದ್ದಾರೆ. ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅಯ್ಯಪ್ಪ ಶರ್ಮ, ಮಂಜುನಾಥ ಹೆಗಡೆ, ಗೀತಾ ಸಿದ್ದಿ ಮುಂತಾದವರು ಚಿತ್ರದಲ್ಲಿದ್ದಾರೆ. ಅನಂತ ಫಿಲ್ಮ್ಸ್ ಅಡಿಯಲ್ಲಿ ಅನಂತಮೂರ್ತಿ ಎಂ.ಹೆಗಡೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
‘150ಕ್ಕೂ ಹೆಚ್ಚು ಸಿದ್ದಿಗಳು ಪಾತ್ರಧಾರಿಗಳಾಗಿಯೇ ನಟಿಸಿರುವುದು ಚಿತ್ರದ ವಿಶೇಷ. ಈ ಚಿತ್ರಕ್ಕಾಗಿ 95ರ ಕಾಲಘಟ್ಟದ ಹಳ್ಳಿಯೊಂದರ ಸೆಟ್ ಹಾಕಿ 83 ದಿನ ಚಿತ್ರೀಕರಿಸಲಾಗಿದೆ. ವಿಶೇಷವಾದ ಸಂಜೀವಿನಿ ಗಿಡವೇ ದೇವಸಸ್ಯ’ ಎಂದರು ನಿರ್ಮಾಪಕ.
ಯಶವಂತ್ ಛಾಯಾಚಿತ್ರಗ್ರಹಣ, ಹರಿ ಅಜಯ್ ಸಂಗೀತ ಸಂಯೋಜನೆ, ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.