
ನಟ ಧರ್ಮೇಂದ್ರ
ಚಿತ್ರ: ಎಎಫ್‌ಪಿ
ಗುವಾಹಟಿ: ಬಾಲಿವುಡ್ ದಂತಕಥೆ ಧರ್ಮೇಂದ್ರ ಅವರ ಕೊನೆಯ ಚಿತ್ರ 'ಇಕ್ಕಿಸ್' ಸಿನಿಮಾದಲ್ಲಿ ಅವರೊಂದಿಗೆ ನಟಿಸಿರುವ ಹಿರಿಯ ನಟಿ ಸುಹಾಸಿನಿ ಮುಲೆ ಅವರು ಸಂದರ್ಶನವೊಂದರಲ್ಲಿ ಧರ್ಮೇಂದ್ರ ಅವರ ಜತೆಗಿನ ಆತ್ಮೀಯತೆ ಹಾಗೂ ಹೃದಯಸ್ಪರ್ಶಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಹಿರಿಯ ಬಾಲಿವುಡ್ ನಟಿ ಸುಹಾಸಿನಿ ಮುಲೆ ಅವರು ಧರ್ಮೇಂದ್ರ ಅವರನ್ನು ನೆನಪಿಸಿಕೊಳ್ಳುತ್ತ, ‘ ಧರ್ಮೇಂದ್ರ ಅವರಿಗೆ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದರು ಆದರೆ ಎಂದಿಗೂ ಸಮಯಪ್ರಜ್ಞೆಯನ್ನು ಕಳೆದುಕೊಂಡಿರಲಿಲ್ಲ‘ ಎಂದು ಹೇಳಿದ್ದಾರೆ.
‘ಧರ್ಮೇಂದ್ರ ಅವರು ತುಂಬಾ ಧೈರ್ಯಶಾಲಿಯಾಗಿದ್ದರು. ನಾವು ಮೊದಲ ಬಾರಿಗೆ ಭೇಟಿಯಾದಾಗ, ಅವರು ಕುಳಿತಲ್ಲಿಂದ ಎದ್ದು ಕುರ್ಚಿಯನ್ನು ನನಗೆ ಕೊಡಲು ಬಂದರು. ಆಗ ನಾನು ಅವರನ್ನು ಕುಳಿತುಕೊಳ್ಳಲು ಹೇಳಿ, ನಾನು ಇನ್ನೊಂದು ಕುರ್ಚಿಯನ್ನು ಕೇಳುತ್ತೇನೆ ಎಂದು ಹೇಳಿದೆ. ಆದರೆ ಅವರು ನನಗೆ, ‘ನೀವು ಕುಳಿತುಕೊಳ್ಳಿ, ನಂತರ ನಾನು ಕುಳಿತುಕೊಳ್ಳುತ್ತೇನೆ. ನೀವು ಕೂರದೇ ನಾನು ಮಾತ್ರ ಕೂರಲು ಹೇಗೆ ಸಾಧ್ಯ? ಎಂದು ಹೇಳಿದ್ದರು.
ಇತರರನ್ನು ಎಂದಿಗೂ ಸಣ್ಣವರು ಎಂದು ಭಾವಿಸಲಿಲ್ಲ
‘ಧರ್ಮೇಂದ್ರ ಅವರು ತುಂಬಾ ದೊಡ್ಡ ನಟರಾದರೂ ಅವರು ಎಂದಿಗೂ ತಾನು ದೊಡ್ಡವನು ಎಂದು ಭಾವಿಸಲಿಲ್ಲ. ಅವರ ಅಭಿಮಾನಿಗಳ ಬಳಿ ಬಂದು ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ವಯಸ್ಸಾದ ಅವರಿಗೆ ಎದ್ದು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಅವರೊಂದಿಗೆ ಕುಳಿತು ಫೋಟೊ ತೆಗೆದುಕೊಳ್ಳುತ್ತಿದ್ದರು’ ಎಂದು ಅವರ ಸಾಧಾರಣ ವ್ಯಕ್ತಿತ್ವದ ಬಗ್ಗೆ ಸುಹಾಸಿನಿ ಮುಲೆ ಹೊಗಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.