ADVERTISEMENT

ನಟ ಧರ್ಮೇಂದ್ರ ನಿಧನಕ್ಕೆ ಸಿಎಂ ಸೇರಿ ಹಲವರಿಂದ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2025, 11:27 IST
Last Updated 24 ನವೆಂಬರ್ 2025, 11:27 IST
   

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರು ಇಂದು (ಸೋಮವಾರ) ನಿಧನರಾಗಿದ್ದಾರೆ. ಹೀ- ಮ್ಯಾನ್ ಆಗಿ 6 ದಶಕಗಳ ಕಾಲ ಹಿಂದಿ ಚಿತ್ರರಂಗವನ್ನು ಆಳಿದ್ದರು. ಇಂದು ಅವರು ಇಹಲೋಕ ತ್ಯಜಿಸಿದ್ದು, ಅವರ ಅಗಲಿಕೆಗೆ ಕರ್ನಾಟಕದ ಅನೇಕ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು 'ಭಾರತ ಚಿತ್ರರಂಗದ ಪ್ರಮುಖರಲ್ಲಿ ಒಬ್ಬರಾಗಿರುವ ಹಿರಿಯ ನಟ ಧರ್ಮೇಂದ್ರ ಅವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಅದ್ಭುತ ಅಭಿನಯ, ಪರದೆ ಮೇಲಿನ ಅವರ ಉಪಸ್ಥಿತಿ ಮತ್ತು ಚಲನಚಿತ್ರಕ್ಕೆ ಅವರು ನೀಡಿದ ಕೊಡುಗೆ ತಲೆಮಾರುಗಳು ಉರುಳಿದರು ಅಳಿಸಲಾಗದ ಗುರುತು ಬಿಟ್ಟಿದ್ದಾರೆ. ಅವರ ಕುಟುಂಬ, ಸಹೋದ್ಯೋಗಿಗಳು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕೊಡಲಿ. ಅವರ ನಿಧನಕ್ಕೆ ನನ್ನ ಸಂತಾಪಗಳು' ಎಂದು ಎಕ್ಸ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ 'ಪ್ರಸಿದ್ಧ ನಟ ಧರ್ಮೇಂದ್ರ ಅವರ ನಿಧನದಿಂದ ಭಾರತೀಯ ಚಿತ್ರರಂಗದ ಒಂದು ಯುಗ ಅಂತ್ಯವಾಗಿದೆ. ನಮ್ಮ ರಾಮನಗರದಲ್ಲಿ ಚಿತ್ರೀಕರಣಗೊಂಡ ಶೋಲೆಯಿಂದ ಹಿಡಿದು ಲೆಕ್ಕವಿಲ್ಲದಷ್ಟು ಸ್ಮರಣೀಯ ಪಾತ್ರಗಳಿಗೆ ಅವರು ಜೀವ ತುಂಬಿದ್ದರು. ಅವರ ಪರಂಪರೆ ಶಾಶ್ವತವಾಗಿ ಉಳಿಯುತ್ತದೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ, ಪ್ರೀತಿಪಾತ್ರರು ಮತ್ತು ಅಭಿಮಾನಿಗಳ ಜೊತೆಗಿರಲು ಬಯಸುತ್ತೇನೆ. ಓಂ ಶಾಂತಿ’ ಎಂದು ಎಕ್ಸ್ ಮೂಲಕ ಸಂತಾಪ ಸೂಚಿಸಿದ್ದಾರೆ.

ADVERTISEMENT

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ 'ಭಾರತೀಯ ಚಲನಚಿತ್ರೋದ್ಯಮದ ಐಕಾನ್ ಆಗಿದ್ದ ಹಿರಿಯ ನಟ ಧರ್ಮೇಂದ್ರ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಪರದೆಯ ಮೇಲಿನ ಅವರ ಪ್ರೀತಿ ಮತ್ತು ವರ್ಚಸ್ಸು ಹಲವು ತಲೆಮಾರುಗಳವರೆಗೆ ಲಕ್ಷಾಂತರ ಜನರ ಹೃದಯಗಳನ್ನು ಮುಟ್ಟಿದೆ. ಅವರ ಕುಟುಂಬ, ಪ್ರೀತಿ ಪಾತ್ರರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಈ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ’ ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಯವರು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದು, ‘ಪ್ರಸಿದ್ಧ ಚಲನಚಿತ್ರ ನಟ ಧರ್ಮೇಂದ್ರ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಭಾರತೀಯ ಚಿತ್ರರಂಗಕ್ಕೆ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಹೇಮಾ ಮಾಲಿನಿ, ಅವರ ಮಕ್ಕಳು ಮತ್ತು ಇಡೀ ಕುಟುಂಬಕ್ಕೆ ನನ್ನ ಸಂತಾಪಗಳು. ಈ ಕಠಿಣ ಸಂದರ್ಭವನ್ನು ಎದುರಿಸುವ ಶಕ್ತಿಯನ್ನು ಅವರಿಗೆ ದೇವರು ನೀಡಲಿ. ಓಂ ಶಾಂತಿ’ ಎಂದು ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.