ಧರ್ಮೇಂದ್ರ ಅವರ ಪುತ್ರ ನಟ ಸನ್ನಿ ಡಿಯೋಲ್
ಮುಂಬೈ: ಬಾಲಿವುಡ್ ನಟ ಧರ್ಮೇಂದ್ರ ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಆದರೆ ಮಾಧ್ಯಮ ಪ್ರತಿನಿಧಿಗಳು ಅವರ ಮನೆಯ ಬಳಿಯೇ ಕ್ಯಾಮೆರಾ ಹಿಡಿದು ನಿಂತಿರುವುದಕ್ಕೆ ಧರ್ಮೇಂದ್ರ ಅವರ ಪುತ್ರ ನಟ ಸನ್ನಿ ಡಿಯೋಲ್ ಅಸಹನೆ ಹೊರಹಾಕಿದ್ದಾರೆ.
‘ನಿಮಗೂ ತಂದೆ– ತಾಯಿ, ಮಕ್ಕಳಿದ್ದಾರೆ. ಈ ರೀತಿ ಮನೆಯ ಸುತ್ತ ಸುತ್ತುವರಿದು ನಿಲ್ಲುವುದು ನಿಜಕ್ಕೂ ಮೂರ್ಖತನ, ನಿಮಗೆ ನಾಚಿಕೆಯಾಗುವುದಿಲ್ಲವೇ?’ ಎಂದು ಕಿಡಿಕಾರಿದ್ದಾರೆ.
ಧರ್ಮೇಂದ್ರ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವುದಕ್ಕೂ ಮುನ್ನ ಮಾಧ್ಯಮಗಳಲ್ಲಿ ಅವರು ನಿಧನರಾಗಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಸುದ್ದಿ ಸುಳ್ಳು ಎಂದು ಸನ್ನಿ ಡಿಯೋಲ್, ಹೇಮಾ ಮಾಲಿನಿ ಸ್ಪಷ್ಟಪಡಿಸಿದ್ದರು. ಜತೆಗೆ ‘ನಮ್ಮ ಖಾಸಗಿತನವನ್ನು ಗೌರವಿಸಿ’ ಎಂದು ಕೇಳಿಕೊಂಡಿದ್ದರು.
ಆನಂತರ ಅವರು ಮನೆಗೆ ತೆರಳಿದಾಗಿನಿಂದ ಅವರ ಮನೆಗೆ ಬಂದು ಹೋಗುವವರನ್ನು ಮಾತನಾಡಿಸಿ ಮಾಧ್ಯಮಗಳು ನಿರಂತರವಾಗಿ ಮಾಹಿತಿ ಕಲೆ ಹಾಕುತ್ತಿದ್ದವು.
ಇದಕ್ಕೆ ಸಿಟ್ಟಾಗಿರುವ ಸನ್ನಿ ಡಿಯೋಲ್ ಆಕ್ರೋಶ ಹೊರಹಾಕಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಮಾಧ್ಯಮಗಳು ಧರ್ಮೇಂದ್ರ ಅವರ ನಿಧನ ಸುದ್ದಿಯನ್ನು ಹರಿಬಿಟ್ಟ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಹೇಮಾ ಮಾಲಿನಿ, ‘ಬೇಜವಾಬ್ದಾರಿ ನಡೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.