
ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್
ನವದೆಹಲಿ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಜತೆಗಿನ ವಿಚ್ಛೇದನ ವದಂತಿಗಳ ನಡುವೆ ಪತಿ ಹಾಗೂ ನಟ ಅಭಿಷೇಕ್ ಬಚ್ಚನ್ ಪ್ರತಿಕ್ರಿಯಿಸಿದ್ದು, ಕಳೆದ ವರ್ಷದಿಂದ ಈ ವದಂತಿಗಳು ಹರಿದಾಡುತ್ತಿವೆ. ಆದರೆ ಇವೆಲ್ಲೂ ಸುಳ್ಳು ಎಂದಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ನಾವು ಇರುವುದರಿಂದ ನಾವು ಹೇಗೆ ಇದ್ದರೂ ಜನ ವದಂತಿಗಳನ್ನು ಹರಡುತ್ತಾರೆ. ಆದರೆ ಇಂತಹ ಸುಳ್ಳು ವದಂತಿಗಳಿಗೆ ಯಾವುದೇ ಆಧಾರವಿರುವುದಿಲ್ಲ. ಇದು ಕೇವಲ ಉದ್ದೇಶಪೂರಕವಾಗಿದೆ ಮತ್ತು ಎಲ್ಲವೂ ಕಟ್ಟುಕಥೆಗಳಾಗಿವೆ ಎಂದು ಪೀಪಿಂಗ್ ಮೂನ್ ಜತೆಗಿನ ಸಂದರ್ಶನದಲ್ಲಿ ಇತ್ತೀಚೆಗೆ ಅಭಿಷೇಕ್ ಮಾತನಾಡಿದ್ದರು. ಅಭಿಷೇಕ್ ಸಂದರ್ಶನ ಕುರಿತು ಎನ್‌ಡಿಟಿವಿ ವರದಿ ಮಾಡಿದೆ.
ಸಾರ್ವಜನಿಕ ವ್ಯಕ್ತಿಯಾಗಿದ್ದರೆ ಜನರು ಸಣ್ಣ ವಿಷಯಗಳ ಬಗ್ಗೆಯೂ ಊಹಿಸಿಕೊಳ್ಳುತ್ತಾರೆ. ಇಂತಹ ವದಂತಿಗಳು ಅಸಂಬದ್ಧ ಹಾಗೂ ಟೊಳ್ಳು. ನಾವು ಮದುವೆಯಾಗುವ ಮೊದಲು ನಮ್ಮ ದಿನಾಂಕಗಳನ್ನು ಊಹಿಸುತ್ತಿದ್ದರು. ನಾವು ಮದುವೆಯಾದ ಮೇಲೆ ನಾವು ಯಾವಾಗ ಬೇರ್ಪಡುತ್ತೇವೆ ಎಂದು ನಿರ್ಧರಿಸಲು ಪ್ರಾರಂಭಿಸಿದ್ದಾರೆ. ಆದರೆ ಸತ್ಯ ಏನೆಂದರೆ ನನಗೆ ಐಶ್ವರ್ಯಾ ಏನೆಂದು ಗೊತ್ತು. ಐಶ್ವರ್ಯಾಗೆ ನಾನು ಏನೆಂಬುವುದು ಗೊತ್ತು. ನಾವು ಪ್ರೀತಿಯಿಂದ ಕೂಡಿದ ಕುಟುಂಬದಲ್ಲಿ ಇರಲು ಇಚ್ಚೀಸುತ್ತೇವೆ ಎಂದಿದ್ದಾರೆ.
ವಿಚ್ಛೇದನದ ಊಹಾಪೋಹಗಳು ತಮ್ಮನ್ನು ಕಾಡುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್, ಇಲ್ಲ. ಸ್ವಲ್ಪವಾದರೂ ಸತ್ಯವಿದ್ದರೆ, ಬಹುಶಃ ಹಾಗೆ ಆಗುತ್ತಿತ್ತು. ನನ್ನ ಕುಟುಂಬದ ಬಗ್ಗೆ ಅಥವಾ ನನ್ನ ಬಗ್ಗೆ ಕಟ್ಟುಕಥೆಗಳು ಅಥವಾ ಸುಳ್ಳುಗಳನ್ನು ನಾನು ಸಹಿಸುವುದಿಲ್ಲ ಎಂದಿದ್ದಾರೆ.
ಕಳೆದ ವರ್ಷ ಐಶ್ವರ್ಯಾ ಮತ್ತು ಅಭಿಷೇಕ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಹಬ್ಬಿದಾಗಿನಿಂದ ಅವರ ವೈಯಕ್ತಿಕ ಜೀವನವು ಸಾರ್ವಜನಿಕವಾಗಿ ಚರ್ಚೆಗೆ ಗುರಿಯಾಗಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ ಐಶ್ವರ್ಯಾ ಮತ್ತು ಅಭಿಷೇಕ್ ಇಬ್ಬರು ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.