ADVERTISEMENT

ದೃಶ್ಯ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದ ಸುದೀಪ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 9:55 IST
Last Updated 27 ನವೆಂಬರ್ 2021, 9:55 IST
ಸುದೀಪ್‌
ಸುದೀಪ್‌   

ಮಲಯಾಳಂನಲ್ಲಿ ತೆರೆಕಂಡು ಹಿಟ್‌ ಆಗಿದ್ದ ನಟ ಮೋಹನ್‌ಲಾಲ್‌ ಅಭಿನಯದ ‘ದೃಶ್ಯಂ’ ಸಿನಿಮಾ ಕನ್ನಡ, ತೆಲುಗು ಹಾಗೂ ಹಿಂದಿಯಲ್ಲೂ ರಿಮೇಕ್‌ ಆಗಿ ಜನಪ್ರಿಯತೆ ಗಳಿಸಿತ್ತು. ಕನ್ನಡದಲ್ಲಿ ತೆರೆಕಂಡ ‘ದೃಶ್ಯ’ ಸಿನಿಮಾ ಬಗ್ಗೆ ಇದೀಗ ಕುತೂಹಲಕಾರಿ ಮಾಹಿತಿಯೊಂದನ್ನು ನಟ ಸುದೀಪ್‌ ಹಂಚಿಕೊಂಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ವಿ.ರವಿಚಂದ್ರನ್‌ ನಟನೆಯ ದೃಶ್ಯ–2 ಭಾಗದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್‌, ‘ಮಾಣಿಕ್ಯ ಸಿನಿಮಾ ಚಿತ್ರೀಕರಣದ ವೇಳೆ, ‘ಮಲಯಾಳಂನಲ್ಲಿ ದೃಶ್ಯಂ ಸಿನಿಮಾ ಬಂದಿದೆಯಂತೆ. ಅದರ ಕಥೆ ಚೆನ್ನಾಗಿದೆ. ಒಮ್ಮೆ ನೋಡಿ’ ಎಂದು ರವಿಚಂದ್ರನ್‌ ಅವರಿಗೆ ಹೇಳಿದ್ದೆ. ರವಿಚಂದ್ರನ್‌ ಅವರು ನೋಡುತ್ತೇನೆ ಎಂದು ಹೇಳುತ್ತಲೇ ಹಲವು ದಿನ ದೂಡಿದ್ದರು. ಆದರೆ ನಾನು ಬಿಡಲಿಲ್ಲ. ಒತ್ತಾಯ ಪೂರ್ವಕವಾಗಿ ರಾಕ್‌ಲೈನ್‌ ಮಾಲ್‌ನಲ್ಲಿ ಅವರಿಗೆ ಈ ಸಿನಿಮಾ ತೋರಿಸುವ ವ್ಯವಸ್ಥೆ ಮಾಡಿದ್ದೆವು. ರವಿಚಂದ್ರನ್‌ ಅವರು ಅದನ್ನು ಮೆಚ್ಚಿಕೊಂಡರು. ‘ಈ ಥರ ಪಾತ್ರಗಳನ್ನು ನೀವು ಮಾಡಬೇಕು. ಇಷ್ಟವಾದರೆ ನಾನೇ ನಿರ್ಮಾಣ ಮಾಡುತ್ತೇನೆ’ ಎಂದು ಹೇಳಿದ್ದೆ. ಆ ಸಂದರ್ಭದಲ್ಲಿ ಇನ್ನೊಬ್ಬರು ಈ ಚಿತ್ರವನ್ನು ಮಾಡುತ್ತೇವೆ ಎಂದು ಕೇಳಿಕೊಂಡರು. ರವಿಚಂದ್ರನ್‌ ಅವರು ಆ ಪಾತ್ರವನ್ನು ಮಾಡುವುದಿದ್ದರಷ್ಟೇ ಒಪ್ಪಿಗೆ ನೀಡುತ್ತೇನೆ ಎಂದು ಷರತ್ತು ಹಾಕಿದ್ದೆ. ಆ ಮಾತಿಗೆ ತಕ್ಕಂತೆ ನಡೆದುಕೊಂಡರು’ ಎಂದು ಸುದೀಪ್‌ ನೆನಪಿಸಿಕೊಂಡರು.

‘ನಾನು ಮಲಯಾಳಂ ಅಥವಾ ತೆಲುಗಿನ ದೃಶ್ಯಂ ಸಿನಿಮಾವನ್ನು ಮೊದಲು ನೋಡಿರಲಿಲ್ಲ. ಮೊದಲು ನೋಡಿದ್ದೇ ಕನ್ನಡದಲ್ಲಿ ಬಂದ ದೃಶ್ಯ. ಎರಡನೇ ಭಾಗವನ್ನೂ ನಾನು ಇನ್ನೂ ವೀಕ್ಷಿಸಿಲ್ಲ. ನನಗಿನ್ನೂ ಕಥೆ ಗೊತ್ತಿಲ್ಲ. ದೃಶ್ಯ–2ನೇ ಭಾಗಕ್ಕೆ ಕಾಯುತ್ತಿದ್ದೇನೆ. ನನ್ನ ಹೆಂಡತಿ ಮಲಯಾಳಿ. ಆದರೆ ನನಗೆ ಮಲಯಾಳಂ ಬರುವುದಿಲ್ಲ. ಮಲಯಾಳಂನ ದೃಶ್ಯಂ–2 ನೋಡು ಎಂದು ಅವಳು ಹೇಳುತ್ತಿರುತ್ತಾಳೆ. ಆದರೆ ನನಗೆ ಸಿನಿಮಾ ನೋಡಲೋ ಸಬ್‌ಟೈಟಲ್‌ ನೋಡಲೋ ಎಂಬ ಕಷ್ಟ. ನಮ್ಮ ಭಾಷೆಯ ಕಲಾವಿದರ ಸಿನಿಮಾ ನೋಡಿದಾಗ ಅದರ ಜೊತೆ ಕನೆಕ್ಟ್‌ ಆಗುತ್ತೇವೆ’ ಎಂದರು ಸುದೀಪ್‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.