ADVERTISEMENT

ಸಂಸ್ಕೃತ– ಕನ್ನಡದ ‘ಏಕಚಕ್ರಂ’: ಸುಚ್ಚೇಂದ್ರ ಪ್ರಸಾದ್‌ ಅಪರೂಪದ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 19:30 IST
Last Updated 28 ಏಪ್ರಿಲ್ 2022, 19:30 IST
ಸಂಸ್ಕೃತ– ಕನ್ನಡದ ‘ಏಕಚಕ್ರಂ’: ಸುಚ್ಚೇಂದ್ರ ಪ್ರಸಾದ್‌ ಅಪರೂಪದ ಪ್ರಯತ್ನ
ಸಂಸ್ಕೃತ– ಕನ್ನಡದ ‘ಏಕಚಕ್ರಂ’: ಸುಚ್ಚೇಂದ್ರ ಪ್ರಸಾದ್‌ ಅಪರೂಪದ ಪ್ರಯತ್ನ   

ಏಕಚಕ್ರ ನಗರದಲ್ಲಿ ಪಾಂಡವರು ಬೀಡುಬಿಟ್ಟಿದ್ದಾಗ ಅಲ್ಲಿ ಭೀಮ ಬಕಾಸುರನನ್ನು ಕೊಂದ ಕಥೆಯನ್ನು ಕೇಳಿದ್ದೇವಲ್ಲಾ. ಅದೇ ಕಥೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಪ್ರಸ್ತುತ ವಿದ್ಯಮಾನಗಳಿಗೆ ಹೊಂದಿಸಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಮೂಡಿಬಂದ ಚಿತ್ರ ‘ಏಕಚಕ್ರಂ’. ದ್ವಾಪರಕ್ಕೊಮ್ಮೆ ಹೋಗಿ, ಇಂದಿನ ಕಾಲಘಟ್ಟಕ್ಕೆ ದೃಶ್ಯ ಸಮೀಕರಿಸಿ ಮತ್ತೆ ಪುರಾಣದೊಂದಿಗೆ ಬೆಸೆಯುವ ಅಪರೂಪದ ಪ್ರಯತ್ನ ಇಲ್ಲಿ ನಡೆದಿದೆ.

ಸಂಸ್ಕೃತದಲ್ಲಿ ಚಲನಚಿತ್ರಗಳು ಬರುವುದೇ ತೀರಾ ಅಪರೂಪ. ಅಂಥದ್ದೊಂದು ಪ್ರಯತ್ನವನ್ನು ಸುಚ್ಚೇಂದ್ರ ಪ್ರಸಾದ್‌ ಮಾಡಿದ್ದಾರೆ. ಸುಚಿತ್ರಾ ಫಿಲ್ಮ್‌ ಸೊಸೈಟಿಯಲ್ಲಿ ಈ ಚಿತ್ರದ ಪ್ರದರ್ಶನ ಇತ್ತೀಚೆಗೆ ನಡೆಯಿತು. ಸಂಸ್ಕೃತ ಚಿತ್ರ ಅರ್ಥವಾದೀತೇ ಎಂಬ ಗುಮಾನಿಯೊಂದಿಗೆ ಪ್ರೇಕ್ಷಕರು ಬಂದಿದ್ದರು. ಆದರೆ, ಕೊನೆಗೆ ಮಕ್ಕಳಿಂದ ಹಿರಿಯರವರೆಗೆ ಕಥೆ ಅರ್ಥವಾಯಿತು. ಎಲ್ಲ ಪ್ರೇಕ್ಷಕರೂ ಸಕಾರಾತ್ಮಕ ಪ್ರತಿಕ್ರಿಯೆಯನ್ನೇ ನೀಡಿದರು.

‘ಹೀಗೊಂದು ಪ್ರಯೋಗ ಮಾಡಬೇಕು ಎಂಬ ಇಚ್ಛೆ ಇತ್ತು. ಸಂಸ್ಕೃತದ ವಿದ್ಯಾರ್ಥಿ ಹಾಗೂ ಅಧ್ಯಯನಾಸಕ್ತನಾಗಿ ಇದು ನನ್ನ ಕರ್ತವ್ಯವೂ ಆಗಿತ್ತು. ಹೀಗೆ ಅಧ್ಯಯನದ ಸಂದರ್ಭದಲ್ಲಿ ಡಾ.ಎನ್‌.ರಂಗನಾಥ ಶರ್ಮಾ ಅವರ ‘ಏಕಚಕ್ರಂ’ ಚತುರಂಕಗಳ ರೂಪಕ ಕೃತಿ ಸಿಕ್ಕಿತು. ಅದನ್ನು ಓದುತ್ತಾ ಹೋದಾಗ ಅನಿಸಿದ್ದು, ಅಂದಿನ ಪರಿಸ್ಥಿತಿ ಈಗಲೂ ಮುಂದುವರಿದಿದೆ. ಇದನ್ನು ಬೆಳ್ಳಿತೆರೆಗೆ ತರಬೇಕು ಅನಿಸಿತು’ ಎಂದರು ಸುಚ್ಚೇಂದ್ರ ಪ್ರಸಾದ್‌.

ADVERTISEMENT

‘ಚಿತ್ರದ ಪ್ರದರ್ಶನಕ್ಕೆ ಉತ್ತಮ ಬೇಡಿಕೆ ಇದೆ. ವಾರಾಂತ್ಯದ ಪ್ರದರ್ಶನಗಳ ಮೂಲಕ ಪ್ರೇಕ್ಷಕರಿಗೆ ಚಿತ್ರವನ್ನು ತಲುಪಿಸಿದ್ದೇವೆ.73 ನಿಮಿಷಗಳ ಈ ಪ್ರಸ್ತುತಿಗೆ ಪ್ರೇಕ್ಷಕರು ಮೂರು ನಾಲ್ಕು ಗಂಟೆಗಳ ಕಾಲ ಚರ್ಚೆ ಮಾಡಿದ್ದಾರೆ. ಆರ್ಥಿಕತೆ ಪ್ರಧಾನವಲ್ಲದ, ಅದನ್ನೂ ಮೀರಿದ, ಕೃತಿಗೆ ನ್ಯಾಯ ದೊರಕಿಸುವ ಸಿನಿಮಾ ಇದು’ ಎಂದರು ಅವರು.

ಭಾಗೀರಥಿ ಬಾಯಿ ಕದಂ, ಶರತ್‌ ಲೋಹಿತಾಶ್ವ, ಹರೀಶ್ ಭಟ್ಟ, ರವೀಶ್‌ ಹೆಗಡೆ, ಗೋಪಿಕಾ ಚಿತ್ರದ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.