ADVERTISEMENT

ಸರಿಹಾದಿಗೆ ಮರಳಿದ ಚಿತ್ರೋತ್ಸವ: ಹದಿನೇಳೆಂಟು, ನಾನು ಕುಸುಮ ಸಿನಿಮಾ

ಪ್ರೇಕ್ಷಕರನ್ನು ಸೆಳೆದ ಕನ್ನಡದ ಹದಿನೇಳೆಂಟು, ನಾನು ಕುಸುಮ ಸಿನಿಮಾ

ಪ್ರೇಮಕುಮಾರ್ ಹರಿಯಬ್ಬೆ
Published 23 ನವೆಂಬರ್ 2022, 19:39 IST
Last Updated 23 ನವೆಂಬರ್ 2022, 19:39 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಪಣಜಿ: ಪಣಜಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ತನ್ನ ಎಂದಿನ ಜಾಡಿಗೆ ಮರಳಿದೆ. ಸಾಂಕ್ರಾಮಿಕ ರೋಗಗಳ ಭಯವಿಲ್ಲದೆ ಪ್ರತಿನಿಧಿಗಳು ಮುಕ್ತವಾಗಿ ಓಡಾಡಿಕೊಂಡು ಸಿನಿಮಾ ನೋಡಲು ಸಾಧ್ಯವಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಎದ್ದು ಕಂಡ ಅವ್ಯವಸ್ಥೆಗಳನ್ನು ಸಂಘಟಕರು ಸರಿಪಡಿಸಿದ್ದಾರೆ. ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಸಿನಿಮಾಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಎರಡು ಆಕರ್ಷಕ ಕ್ಯಾಟಲಾಗ್‌ಗಳು ಮುದ್ರಣಗೊಂಡಿವೆ. ಅವು ಎಲ್ಲಾ ಪ್ರತಿನಿಧಿಗಳಿಗೂ ಸಕಾಲದಲ್ಲಿ ತಲುಪಿವೆ. ಚಿತ್ರೋತ್ಸವಕ್ಕೆ ನಿಸರ್ಗವೂ ಕೈಜೋಡಿಸಿದೆ. ಆಗಾಗ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗುತ್ತಿದ್ದು, ಹಗಲು ಮತ್ತು ರಾತ್ರಿ ಉಷ್ಣಾಂಶದಲ್ಲಿ ಗಣನೀಯ ಇಳಿಕೆಯಾಗಿದೆ.

ಸ್ಮಾರ್ಟ್‌ಫೋನ್‌ ಬಳಸಿ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಿಕೊಳ್ಳುವ ವ್ಯವಸ್ಥೆ ಬಗ್ಗೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗಿದೆ. ಹತ್ತು ತೆರೆಗಳಲ್ಲಿ ಚಿತ್ರಗಳ ಪ್ರದರ್ಶನವಾಗುತ್ತಿದ್ದರೂ ತಮಗೆ ಬೇಕಾದ ಸಿನಿಮಾಗಳು ಸಿಕ್ಕಲಿಲ್ಲ ಎನ್ನುವ ಗೊಣಗಾಟ ಇದ್ದೇ ಇದೆ. ಯುವಪೀಳಿಗೆ ಸಿನಿಮಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರೋತ್ಸವಕ್ಕೆ ಬಂದಿರುವುದು ಸ್ವಾಗತಾರ್ಹ ಬೆಳವಣಿಗೆ. ದಕ್ಷಿಣ ಭಾರತದ ರಾಜ್ಯಗಳ ಪ್ರತಿನಿಧಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ADVERTISEMENT

ಕಳೆದ ಮೂರು ದಿನಗಳ ಅವಧಿಯಲ್ಲಿ ದಕ್ಷಿಣದ ರಾಜ್ಯಗಳ ಸಿನಿಮಾ ನಟ, ನಟಿಯರು ಮತ್ತು ತಂತ್ರಜ್ಞರು ಹೆಚ್ಚಾಗಿ ಕಂಡು ಬರಲಿಲ್ಲ. ನವಾಜುದ್ದೀನ್‌ ಸಿದ್ಧಿಖಿ, ನಾನಾ ಪಾಟೇಕರ್‌, ಮುಖೇಶ್‌ ರಿಷಿ ಮತ್ತಿತರರು ಚಿತ್ರೋತ್ಸವದಲ್ಲಿ ಕಂಡು ಬಂದ ಪ್ರಮುಖರು. ತೆಲುಗಿನ ಮೆಗಾಸ್ಟಾರ್‌ ಚಿರಂಜೀವಿ ಅವರಿಗೆ ‘ದ ಸಿನಿಮಾ ಪರ್ಸನಾಲಿಟಿ ಆಫ್‌ ದ ಇಯರ್‌’ ಪ್ರಶಸ್ತಿ ಘೋಷಣೆ ಆಗಿದ್ದು ಸಮಾರೋಪ ಸಮಾರಂಭಕ್ಕೆ ಅವರು ಆಗಮಿಸುತ್ತಾರೆಂಬ ನಿರೀಕ್ಷೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಪ್ರತಿನಿಧಿಗಳಲ್ಲಿದೆ.

ಕನ್ನಡದ ಹದಿನೇಳೆಂಟು, ನಾನು ಕುಸುಮ, ತೆಲುಗಿನ ಕುದಿರಾಂ ಬೋಸ್‌, ತಮಿಳಿನ ಕೀಡ, ಕುರಂಗು ಪೆಡಲ್‌, ಮಲಯಾಳಂನ ಅರಿಯಿಪ್ಪು, ಹಿಂದಿಯ ಸ್ಟೋರಿ ಟೆಲ್ಲರ್‌, ಸೇರಿದಂತೆ ಕಮರ್ಷಿಯಲ್‌ ಸಿನಿಮಾಗಳಾದ
ಜೈ ಭೀಮ್‌, ಆರ್‌ಆರ್‌ಆರ್‌, ಕಾಶ್ಮೀರ್‌ ಫೈಲ್ಸ್‌ ಇತ್ಯಾದಿ ಸಿನಿಮಾಗಳು ಪ್ರತಿನಿಧಿಗಳನ್ನು ದೊಡ್ಡಮಟ್ಟ
ದಲ್ಲಿ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.