ಬೆಂಗಳೂರು: ‘ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರಕ್ಕೆ ಗರಿಷ್ಠ
₹200 ಮಿತಿ ಹೇರಿ ರಾಜ್ಯ ಗೃಹ ಇಲಾಖೆ ಹೊರಡಿಸಿರುವ ಕರಡು ಅಧಿಸೂಚನೆ ಖಂಡಿತವಾಗಿಯೂ ಆದೇಶ ರೂಪ ಪಡೆಯಲಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಬಾರಿ ವಾರ್ತಾ ಇಲಾಖೆಯಿಂದ ಈ ಅಧಿಸೂಚನೆ ಬಂದಿತ್ತು. ಹೀಗಾಗಿ ಅದಕ್ಕೆ ಕೋರ್ಟ್‌ನಲ್ಲಿ ತಡೆ ಬಂದಿತ್ತು. ಈ ಬಾರಿ ಗೃಹ ಇಲಾಖೆಯೇ ನಿಯಮದ ಪ್ರಕಾರ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಗೆ ನಮ್ಮ ನಿರ್ಮಾಪಕರ ಒಪ್ಪಿಗೆ ಇದೆ. ಕೆಲವರ ಆಕ್ಷೇಪವಿರಬಹುದು. ಕನ್ನಡ ನಿರ್ಮಾಪಕರ ದೊಡ್ಡ ಬಜೆಟ್‌ನ ಸಿನಿಮಾಗಳು ಬಂದ ಸಂದರ್ಭದಲ್ಲಿ ಟಿಕೆಟ್ ದರ ನಿಗದಿ ಬಗ್ಗೆ ಅವರ ಮನವಿಯ ಪರವಾಗಿ ವಾಣಿಜ್ಯ ಮಂಡಳಿ ನಿಲ್ಲಲಿದೆ. ಈ ಕುರಿತ ಸಲಹೆಯನ್ನು ಸರ್ಕಾರಕ್ಕೆ ನೀಡಲಾಗುವುದು’ ಎಂದರು.
‘ದೊಡ್ಡ ನಿರ್ಮಾಪಕರು, ಮಲ್ಟಿಪ್ಲೆಕ್ಸ್‌ನವರು ಸದ್ಯ ಆಕ್ಷೇಪ ಮಾಡಿದರೂ ಮುಂದೆ ಅವರಿಗೂ ಈ ಆದೇಶದ ಪರಿಣಾಮ ತಿಳಿಯಲಿದೆ. ಒಂದು ಸಾವಿರ ಜನರ ಬದಲಾಗಿ ಹತ್ತು ಸಾವಿರ ಜನ ಸಿನಿಮಾ ನೋಡುತ್ತಾರೆ. ‘ಕಾಂತಾರ’ ಪ್ಯಾನ್ ಇಂಡಿಯಾ ಆಗಿ ರಿಲೀಸ್ ಆಗಿರಲಿಲ್ಲ. ಕಮ್ಮಿ ಚಿತ್ರಮಂದಿರಗಳಲ್ಲಿ ಸಾಮಾನ್ಯ ದರದಲ್ಲೇ ಪ್ರದರ್ಶನ ಕಂಡಿತ್ತು. ದಿನಗಳು ಉರುಳಿದಂತೆ ದೊಡ್ಡ ಮಟ್ಟಿನ ಕಲೆಕ್ಷನ್ ಮಾಡಿತ್ತು. ₹200 ರೂಪಾಯಿ ಒಳಗಿನ ದರದಲ್ಲೇ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಲಿಲ್ಲವೇ’ ಎಂದು ಹೇಳಿದರು.
ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕ ಸಾ.ರಾ.ಗೋವಿಂದು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.