ADVERTISEMENT

ಸಂಸ್ಕಾರದಿಂದ ಈ ವರೆಗೆ... ಕಾರ್ನಾಡರ ಸಿನಿಮಾ ಯಾನ

ನಾಟಕಕಾರನ ಚಿತ್ರ ಪಯಣ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 14:20 IST
Last Updated 10 ಜೂನ್ 2019, 14:20 IST
   

ಜ್ಞಾನಪೀಠ ಪ್ರಶಸ್ತಿ ಪುರಷ್ಕೃತ, ಕನ್ನಡದ ಮೇರು ಸಾಹಿತಿ ಗಿರೀಶ ಕಾರ್ನಾಡ ಅವರು ಸಾಹಿತ್ಯ, ನಾಟಕ, ರಂಗಭೂಮಿ, ಸಾಮಾಜಿಕ ಹೋರಾಟ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಚಲನಚಿತ್ರ ರಂಗದಲ್ಲೂ ಸೃಜನಶೀಲ ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಅವರು ಸೋಮವಾರ(ಜೂನ್‌ 10, 2019) ಜಗದ ಆಟ ಮುಗಿಸಿದ್ದಾರೆ.

ಕಾರ್ನಾಡ್‌ ಸುಮಾರು 49 ವರ್ಷಗಳಿಂದ ಸಿನಿಮಾ ಕ್ಷೇತ್ರದೊಂದಿಗೆ ನಂಟು ಹೊಂದಿದ್ದರು. ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿ ಆಧಾರಿತ ಅದೇ ಹೆಸರಿನ ಚಲನಚಿತ್ರದ ಮೂಲಕ 1970ರ ಮೇ 13ರಂದು ಪ್ರಾಣೇಶಾಚಾರ್ಯ ಪಾತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಇದು ಕನ್ನಡಕ್ಕೆ ಮೊಟ್ಟ ಮೊದಲ ಸ್ವರ್ಣ ಕಮಲ ಪ್ರಶಸ್ತಿಯನ್ನು ತಂದುಕೊಟ್ಟಿದೆ.

ADVERTISEMENT
ಕಾರ್ಯಕ್ರಮವೊಂದರಲ್ಲಿ ಗಿರೀಶ ಕಾರ್ನಡ ಮತ್ತು ಪಿ.ಲಂಕೇಶ್‌–1965

ಕನ್ನಡದ ವಂಶವೃಕ್ಷ, ನೆನಪಿನ ದೋಣಿ, ವಂದೇ ಮಾತರಂ, ಆ ದಿನಗಳು, ಕೆಂಪೇಗೌಡ, ರಣವಿಕ್ರಮ, ಹಿಂದಿ ಭಾಷೆಯ ಟೈಗರ್ ಜಿಂದಾ ಹೈ, ಶಿವಾಯ್, ಏಕ್ ಥಾ ಟೈಗರ್, 24, ನರ್ತಕಿ, ಹೇ ರಾಮ್ (ತಮಿಳು), ಧರ್ಮಚಕ್ರಂ, ಶಂಕರ್ ದಾದಾ ಎಂಬಿಬಿಎಸ್ (ತೆಲುಗು), ಸೇರಿದಂತೆ ಮಲಯಾಳಂ, ಮರಾಠಿ ಹೀಗೆ ಬಹುಭಾಷೆಗಳ 92 ಚಲನಚಿತ್ರಗಳಲ್ಲಿ ಅಭಿನಯಸಿದ್ದಾರೆ.

ಚಲನಚಿತ್ರ ನಿರ್ದೇಶನದಲ್ಲೂ ಛಾಪು ಮೂಡಿಸಿದ್ದ ಕಾರ್ನಾಡರು ಸಾಕ್ಷ್ಯಚಿತ್ರ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಬಿ.ವಿ. ಕಾರಂತರ ಜತೆಗೂಡಿ ಮೊದಲಬಾರಿಗೆ 1971ರಲ್ಲಿ ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ‘ವಂಶವೃಕ್ಷ‘ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದರು. ಈ ಚಿತ್ರ ನಿರ್ದೇಶನಕ್ಕೆ ಸ್ವರ್ಣ ಪದಕ ಮತ್ತು ಫಿಲ್ಮ್ ಫೇರ್‌ ಪ್ರಶಸ್ತಿಗಳು ಸಂದಿವೆ.

ಕಾರ್ನಾಡ್‌ ನಿರ್ದೇಶನದಕಾಡು, ತಬ್ಬಲಿಯು ನೀನಾದೆ ಮಗನೆ ಹಾಗೂ ಶಂಕರ್ ನಾಗ್ ಅಭಿನಯಿಸಿರುವ ‘ಒಂದಾನೊಂದು ಕಾಲದಲ್ಲಿ’ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿಹಾಗೂ ಫಿಲ್ಮ್‌ ಫೇರ್‌ ಪ್ರಶಸ್ತಿಗಳನ್ನು ಪಡೆದಿವೆ.

ಕಾನೂರು ಹೆಗ್ಗಡತಿ, ಕಾಡು, ಗೋಧೂಳಿ ಅವರು ನಿರ್ದೇಶಿಸಿದ ಪ್ರಮುಖ ಚಿತ್ರಗಳಾಗಿವೆ. ಅವರ ಸೃಜನ ಶೀಲ ನಿರ್ದೇಶನಕ್ಕೆ ಫಿಲ್ಮ್ ಫೇರ್ ಸೇರಿದಂತೆ ಚಲನಚಿತ್ರ ಅಕಾಡೆಮಿ ನೀಡುವ ಅನೇಕ ಪ್ರಶಸ್ತಿಗಳು ಸಂದಿವೆ. ಅವರಿಗೆ 1974ರಲ್ಲಿ ಪದ್ಮಶೀ, 1992ರಲ್ಲಿ ಪದ್ಮ ಭೂಷಣ, 1998ರಲ್ಲಿ ಜ್ಞಾನಪೀಠ ಪ್ರಶಸ್ತಿ ಹಾಗೂರಂಗಭೂಮಿ ಸೇವೆಗೆ ಗುಬ್ಬಿ ವೀರಣ್ಣ ಪ್ರಶಸ್ತಿಸಂದಿವೆ.

ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅವರು ಮಾಲ್ಗುಡಿ ಡೇಸ್ ಮತ್ತು ಇಂದ್ರಧನುಷ್ ಧಾರಾವಾಹಿಗಳಲ್ಲಿ ತಂದೆಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. 1974–75ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಫ್‌ಟಿಐಐ) ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಅವರು ಅಭಿನಯಿಸಿರುವ ನಾಲ್ಕು ಕನ್ನಡ, ಮತ್ತು ಒಂದು ತೆಲುಗು ಸಿನಿಮಾ ಇದೇ ವರ್ಷ ಬಿಡುಗಡೆಗೆ ಕಾದಿವೆ.ಅಪ್ನಾ ದೇಶ್,ಶಬ್ದಮಣಿ, ವಿದುರ, ಪೋರ ಮತ್ತು ಸ್ಕೆಚ್ ಫಾರ್ ಲವ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.

ಇವುಗಳನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.