ADVERTISEMENT

‘ರತ್ನನ್‌ಪ್ರಪಂಚ’ ಖ್ಯಾತಿಯ ನಟ ಪ್ರಮೋದ್‌ ಅಭಿನಯದ ಹೊಸ ಚಿತ್ರ ‘ಹಲ್ಕಾ ಡಾನ್‌’

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 22:30 IST
Last Updated 26 ಅಕ್ಟೋಬರ್ 2025, 22:30 IST
ಚಿತ್ರಕ್ಕೆ ಕ್ಲ್ಯಾಪ್‌ ಮಾಡಿದ ಸುದೀಪ್‌. ಶಿವರಾಜ್‌ಕುಮಾರ್‌ ಇದ್ದಾರೆ. 
ಚಿತ್ರಕ್ಕೆ ಕ್ಲ್ಯಾಪ್‌ ಮಾಡಿದ ಸುದೀಪ್‌. ಶಿವರಾಜ್‌ಕುಮಾರ್‌ ಇದ್ದಾರೆ.    

‘ರತ್ನನ್‌ಪ್ರಪಂಚ’ ಖ್ಯಾತಿಯ ನಟ ಪ್ರಮೋದ್‌ ನಟನೆಯ ಹೊಸ ಸಿನಿಮಾದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ‘ಹಲ್ಕಾ ಡಾನ್‌’ ಆಗಿ ತೆರೆ ಮೇಲೆ ಬರಲು ಪ್ರಮೋದ್‌ ಸಜ್ಜಾಗಿದ್ದು, ಚಿತ್ರಕ್ಕೆ ನಟ ಸುದೀಪ್‌ ಕ್ಲ್ಯಾಪ್‌ ಮಾಡಿದರು. ನಟ ಶಿವರಾಜ್‌ಕುಮಾರ್‌ ಮೊದಲ ದೃಶ್ಯಕ್ಕೆ ಆ್ಯಕ್ಷನ್‌ ಕಟ್‌ ಹೇಳಿದರು. ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್‌, ನಟ ದುನಿಯಾ ವಿಜಯ್‌ ಜೊತೆಯಾದರು. 

‘ಟಗರು’, ‘ಸಲಗ’ ಹಾಗೂ ‘ಯುಐ’ ಚಿತ್ರಗಳನ್ನು ನಿರ್ಮಿಸಿರುವ ಕೆ.ಪಿ.ಶ್ರೀಕಾಂತ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಛಲಾ ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ವೀನಸ್ ಎಂಟರ್‌ಟೈನರ್ ಬ್ಯಾನರ್ ಅಡಿಯಲ್ಲಿ‌ ಮೂಡಿಬರುತ್ತಿರುವ ನಾಲ್ಕನೇ ಚಿತ್ರ ಇದಾಗಿದೆ. ಚಿತ್ರಕ್ಕೆ ‘ಸಾಯಿ ಕುಮಾರ್‌ ಫ್ಯಾನ್‌’ ಎಂಬ ಅಡಿಬರಹವಿದ್ದು, ಸಾಯಿಕುಮಾರ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಮೋದ್ ನಾಯಕನಾಗಿ, ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರಮೇಶ್ ಇಂದಿರಾ, ಜ್ಯೋತಿ ರೈ ತಾರಾಬಳಗದಲ್ಲಿದ್ದಾರೆ.

ಚಿತ್ರತಂಡಕ್ಕೆ ಶುಭಕೋರಿ ಮಾತನಾಡಿದ ದುನಿಯಾ ವಿಜಯ್‌, ‘ಶ್ರೀಕಾಂತ್ ಅವರ ಮೇಲೆ ಪ್ರೀತಿ, ಕೋಪ ಎರಡೂ ಇದೆ. ನನಗೆ ಸಿನಿಮಾ ಮಾಡದೇ ಇದ್ದಾಗ ಕೋಪ, ಸಿನಿಮಾ ಮಾಡಿದಾಗ ಖುಷಿ ಇರುತ್ತದೆ. ನಾನು ಒಂದು ಹಂತದಿಂದ ದೊಡ್ಡ ಮಟ್ಟಕ್ಕೆ ಹೋಗಲು ಕಾರಣ ಶ್ರೀಕಾಂತ್ ಅವರ ಬ್ಯಾನರ್. ‘ಸಲಗ’ ನನಗೆ ಮತ್ತೊಂದು ಜನ್ಮ ಕೊಟ್ಟ ಸಿನಿಮಾ. ಗಾಂಧಿನಗರದಲ್ಲಿನ ರೇಸ್‌ ಕುದುರೆಗಳನ್ನು ಸರಿಯಾಗಿ ಗುರುತಿಸುವ ಸಾಮರ್ಥ್ಯ ಶ್ರೀಕಾಂತ್‌ ಅವರಿಗಿದೆ. ‘ರತ್ನನ್‌ಪ್ರಪಂಚ’ದಲ್ಲಿ ಪ್ರಮೋದ್ ಅದ್ಭುತವಾಗಿ ನಟಿಸಿದ್ದರು’ ಎಂದರು. 

ADVERTISEMENT

ಮುಹೂರ್ತದ ಸಂದರ್ಭದಲ್ಲೇ ಶಿವರಾಜ್‌ಕುಮಾರ್‌ ಹಾಗೂ ವಿಜಯ್ ಅವರ ಜೊತೆ ಸಿನಿಮಾ ಮಾಡುವುದಾಗಿ ಶ್ರೀಕಾಂತ್‌ ಘೋಷಿಸಿದರು. 

‘ಶಿವರಾಜ್‌ಕುಮಾರ್‌ ಅವರ ಜೊತೆ ಸಿನಿಮಾ ಮಾಡಿದಾಗ ನನ್ನನ್ನೂ ಹಾಕಿಕೊಳ್ಳಿ’ ಎಂದು ಶ್ರೀಕಾಂತ್‌ ಅವರಿಗೆ ಹೇಳಿದ ಪ್ರಮೋದ್‌, ‘ನಾನು ಶಿವಣ್ಣ ಬಳಿಕ ಏಟು ತಿನ್ನಬೇಕು. ಅಂದರೆ ಅವರ ಜೊತೆ ನಟಿಸಬೇಕು ಎಂಬ ಆಸೆ ಇದೆ. ನಿರ್ದೇಶಕರಾದ ಛಲಾ ಅವರು ಚೆನ್ನಾಗಿ ಕಥೆ ಬರೆದಿದ್ದಾರೆ’ ಎಂದರು. 

ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ನಿರ್ಮಾಣವಾಗುತ್ತಿದೆ. ವಿ. ಹರಿಕೃಷ್ಣ ಸಂಗೀತ, ಸತ್ಯಾ ಹೆಗಡೆ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಸಾಯಿಕುಮಾರ್‌ 
ಡಾರ್ಕ್‌ ಕಾಮಿಡಿ ಜಾನರ್‌ನಲ್ಲಿ ಸಿನಿಮಾವಿದೆ. ಹೀರೊ ಹೆಸರೇ ‘ಹಲ್ಕಾ ಡಾನ್‌’ ಎಂದು. ನವೆಂಬರ್‌ 15ರಿಂದ ಶೂಟಿಂಗ್‌ ಆರಂಭಿಸಲಿದ್ದೇವೆ. ನಾನು ಸಾಯಿಕುಮಾರ್‌ ಅವರ ಫ್ಯಾನ್‌. ಹೀಗಾಗಿ ಅವರಿಗೇ ಈ ಸಿನಿಮಾವನ್ನು ಅರ್ಪಿಸುತ್ತಿದ್ದೇನೆ. 80–90ರ ದಶಕದ ಚಿತ್ರರಂಗದ ಹೈಲೈಟ್ಸ್‌ ಈ ಸಿನಿಮಾದಲ್ಲಿರಲಿದೆ. 
ಛಲಾ ನಿರ್ದೇಶಕ 

ಅಪ್ಪ–ಅಮ್ಮನ ಕನಸು ನನಸು

ಕಾರ್ಯಕ್ರಮದಲ್ಲಿ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ನಟ ಸಾಯಿಕುಮಾರ್ ಅವರನ್ನು ಚಿತ್ರತಂಡ ಸನ್ಮಾನಿಸಿತು. ಇದೇ ವೇಳೆ ಮಾತನಾಡಿದ ಸಾಯಿಕುಮಾರ್‌ ‘1975ನಲ್ಲಿ ‘ದೇವುಡು ಚೇಸಿನ ಪೆಳ್ಳಿ’ ಎಂಬ ನನ್ನ ಮೊದಲ ಸಿನಿಮಾ ತೆಲುಗಿನಲ್ಲಿ ತೆರೆಕಂಡಿತು. ಬಾಲನಟನಾಗಿ ಆ ಸಿನಿಮಾದಲ್ಲಿ ನಟಿಸಿದ್ದೆ. 2025ಕ್ಕೆ ಸಿನಿಮಾರಂಗಕ್ಕೆ ಕಾಲಿಟ್ಟು 50 ವರ್ಷ ಉರುಳಿದೆ. ಅಪ್ಪ–ಅಮ್ಮ ಹೀರೊ–ಹಿರೊಯಿನ್‌ ಆಗುವ ಕನಸು ಹೊತ್ತಿದ್ದರು. ಈ ಕನಸು ನಮ್ಮ ಮೂಲಕ ನನಸಾಗಿದೆ. ಸುದೀಪ್‌ ಅವರ ಜೊತೆ ‘ಕೆಂಪೇಗೌಡ’ದಲ್ಲಿ ನಾನೇ ನಟಿಸಬೇಕಿತ್ತು. ನಾನೇ ಪೊಲೀಸ್‌ ಆಗಿ ನಟಿಸಿದ್ದೇನೆ ಹೀಗಾಗಿ ಸರಿಯಾಗುವುದಿಲ್ಲ ಎಂದಿದ್ದೆ. ಅದೃಷ್ಟ ಏನೆಂದರೆ ರವಿಶಂಕರ್‌ ಈ ಸಿನಿಮಾ ಬಳಿಕ ಸಾಲು ಸಾಲು ಸಿನಿಮಾ ಮಾಡಿದ. 1996ರಲ್ಲಿ ‘ಪೊಲೀಸ್‌ ಸ್ಟೋರಿ’ ತೆರೆಕಂಡಿತು. ಹೀರೊ ಆಗಿ ಕನ್ನಡದಲ್ಲೇ 54 ಸಿನಿಮಾಗಳನ್ನು ಮಾಡಿದೆ. ವರ್ಷಕ್ಕೆ ಸರಾಸರಿ ಏಳೆಂಟು ಸಿನಿಮಾಗಳನ್ನು ಮಾಡುತ್ತಿದ್ದೆ. 25–26 ದಿನಗಳಲ್ಲಿ ಸಿನಿಮಾಗಳನ್ನು ಪೂರ್ಣಗೊಳಿಸುತ್ತಿದ್ದೆವು. ನನ್ನ ಡೈಲಾಗ್ಸ್‌ಗಳೇ ನನ್ನ ಕೈಹಿಡಿದವು. ‘ಹಲ್ಕಾ ಡಾನ್‌’ ಎಂಬ ಶೀರ್ಷಿಕೆ ಕೇಳಿ ಒಂದು ಕ್ಷಣ ಯೋಚಿಸಿದ್ದೆ. ಸಿನಿಮಾದ ಕಥೆ ಕೇಳಿದ ಬಳಿಕ ಒಪ್ಪಿಕೊಂಡೆ’ ಎಂದರು.