‘ಹಿಟ್’ ಸರಣಿ ಸಿನಿಮಾಗಳನ್ನು ನೀಡಿರುವ ಶೈಲೇಶ್ ಕೋಲನು ನಿರ್ದೇಶನದ ಹೊಸ ಪ್ರಾಜೆಕ್ಟ್ ‘ಹಿಟ್–3’. ಈ ಚಿತ್ರ ಇಂದು(ಮೇ 1) ತೆರೆಕಾಣುತ್ತಿದ್ದು, ನಾನಿ ಐಪಿಎಸ್ ಅರ್ಜುನ್ ಸರ್ಕಾರ್ ಆಗಿ ಕಾಣಿಸಿಕೊಂಡಿದ್ದಾರೆ. ‘ಮೃದುಲಾ’ ಎಂಬ ಪಾತ್ರದಲ್ಲಿ ‘ಕೆ.ಜಿ.ಎಫ್.’ ಬೆಡಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ.
‘ನನ್ನ ಪ್ರತಿಯೊಂದು ಸಿನಿಮಾದ ಪ್ರಚಾರ ಅಂತ್ಯಗೊಳ್ಳುವುದೇ ಬೆಂಗಳೂರಿನಲ್ಲಿ. ನನ್ನ ಸಿನಿಮಾ ಬಿಡುಗಡೆಗೂ ಮುನ್ನ ಬೆಂಗಳೂರಿಗೆ ಭೇಟಿ ನೀಡುವುದನ್ನು ಬಿಡುವುದಿಲ್ಲ. ಪ್ರತಿ ಬಾರಿಯೂ ಬಂದಾಗ ಶಿವಣ್ಣ, ಸುದೀಪ್ ಅವರು ನನ್ನನ್ನು ಕುಟುಂಬದಂತೆ ನೋಡಿಕೊಳ್ಳುತ್ತಾರೆ. ನಾನು ಇಲ್ಲಿಯವನೇ ಎನ್ನುವ ಭಾವನೆ ಮೂಡಿಸುತ್ತಾರೆ. ಬೆಂಗಳೂರಿನಲ್ಲಿ ನನ್ನ ಸಿನಿಮಾಗಳಿಗೆ ಹೆಚ್ಚಿನ ಪ್ರೀತಿ ದೊರಕಿದೆ. ಈ ಸಿನಿಮಾದಲ್ಲಿ ಕನ್ನಡದ ನಟಿಯೇ ನನ್ನ ಜೊತೆ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಸಿನಿಮಾಗೆ ಡಬ್ಬಿಂಗ್ ಮಾಡುವುದರ ಜೊತೆಗೆ ಕನ್ನಡದ ಆವೃತ್ತಿಗೂ ಶ್ರೀನಿಧಿಯೇ ಡಬ್ ಮಾಡಿದ್ದಾರೆ. ಕನ್ನಡದ ಮೇಲೆ ಅವರಿಗೆ ಇರುವ ಪ್ರೀತಿಯನ್ನು ನಾನು ಅವರಲ್ಲಿ ಕಂಡಿದ್ದೇನೆ. ಈ ಚಿತ್ರದ ಬಗ್ಗೆ ಬಹಳಷ್ಟು ನಂಬಿಕೆ ಇದೆ. ನಾನು ಸಿನಿಮಾ ನೋಡಿದ್ದೇನೆ. ಅದ್ಭುತವಾಗಿ ಮೂಡಿಬಂದಿದೆ. ನಾನು ವಿಭಿನ್ನ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದೇನೆ. ಯಾವುದೇ ಜಾನರ್‌ಗೆ ಅಂಟಿಕೊಳ್ಳುವುದಿಲ್ಲ. ಸದಾ ಹೊಸದನ್ನು ಕಲಿಯಲು ಪ್ರಯತ್ನ ಮಾಡುತ್ತಿರುತ್ತೇನೆ’ ಎಂದರು ನಾನಿ.
‘ತೆರೆ ಮೇಲೆ ನನ್ನನ್ನು ನಾನು ನೋಡಿ ಮೂರು ವರ್ಷವಾಗಿದೆ. ‘ಕೆ.ಜಿ.ಎಫ್’ ಸರಣಿ ನನಗೆ ಹೆಚ್ಚಿನ ಪ್ರೀತಿಯನ್ನು ತಂದುಕೊಟ್ಟಿದೆ. ಇದು ತೆಲುಗಿನಲ್ಲಿ ನನ್ನ ಮೊದಲ ಸಿನಿಮಾ. ನಾನಿ ಅವರ ಜೊತೆ ಸಿನಿಮಾ ಮಾಡಲು ಅವಕಾಶ ಸಿಕ್ಕಿದ್ದೇ ಭಾಗ್ಯ. ಹಿಟ್ 1 ಮತ್ತು 2ನೇ ಸಿನಿಮಾವನ್ನು ನೋಡದೇ ಇರುವವರೂ ಈ ಸಿನಿಮಾ ನೋಡಬಹುದು. ಇದರಲ್ಲಿ ಬೇರೆಯದೇ ಕಥೆಯಿದೆ’ ಎನ್ನುತ್ತಾರೆ ಶ್ರೀನಿಧಿ ಶೆಟ್ಟಿ.
‘ಹಿಟ್–3’ ಸಿನಿಮಾ ಹಿಂದಿ, ಕನ್ನಡ, ತಮಿಳು ಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಶಾಂತಿ ತಿಪಿರ್ನೇನಿ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದ್ದು, ಮಿಕ್ಕಿ ಜೆ. ಮೇಯರ್ ಸಂಗೀತ, ಸಾನು ಜಾನ್ ವರ್ಗೀಸ್ ಛಾಯಾಚಿತ್ರಗ್ರಹಣ ಹಾಗೂ ಕಾರ್ತಿಕ್ ಶ್ರೀನಿವಾಸ್ ಸಂಕಲನ ಚಿತ್ರಕ್ಕಿದೆ.
ನಾನು ಸಾನ್ವಿ ಅವರ ದನಿಯ ದೊಡ್ಡ ಫ್ಯಾನ್. ಪ್ರತಿ ಬಾರಿಯೂ ಸಾನ್ವಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಹಾಡು ಹಾಡುವಂತೆ ಕೇಳಿಕೊಳ್ಳುತ್ತೇನೆ.ನಾನಿ ನಟ
ಟ್ರೇಲರ್‌ನಲ್ಲಿ ಸಾನ್ವಿ ದನಿ
‘ಹಿಟ್–3’ ಚಿತ್ರದ ಟ್ರೇಲರ್‌ನಲ್ಲಿ ಬರುವ ಬಿಜಿಎಂನಲ್ಲಿ(ಬ್ಯಾಕ್ ಗ್ರೌಂಡ್ ಮ್ಯೂಸಿಕ್) ಸಾನ್ವಿ ಸುದೀಪ್ ದನಿ ನೀಡಿದ್ದು ಇದನ್ನು ಸ್ವತಃ ನಾನಿ ಮೆಚ್ಚಿಕೊಂಡಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗಕ್ಕೆ ಸಾನ್ವಿ ಪ್ರವೇಶವಾಗಿದೆ. ಕನ್ನಡದ ‘ಜಿಮ್ಮಿ’ ಸಿನಿಮಾದ ಟೀಸರ್‌ಗೆ ಇಂಗ್ಲಿಷ್ ಹಾಡು ಬರೆದು ಹಾಡಿದ್ದರು ಸಾನ್ವಿ. ಅವರ ಕಂಚಿನ ಕಂಠಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.