ADVERTISEMENT

Tulu Film Imbu: ‘ಇಂಬು’ವಿನಲ್ಲಿ ದರ್ಶನ ಪಾತ್ರಿಯ ಕಥೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 23:30 IST
Last Updated 16 ನವೆಂಬರ್ 2025, 23:30 IST
ಚಿತ್ರದ ದೃಶ್ಯ
ಚಿತ್ರದ ದೃಶ್ಯ   
‘ಕಾಂತಾರ’ ಚಿತ್ರದ ಬಳಿಕ ತುಳುನಾಡಿನ ದೇವರು, ದೈವಗಳನ್ನು ಪರಿಚಯಿಸುವ ಕಥೆಗಳು ಹೆಚ್ಚಾಗಿವೆ. ಆದರೆ ದಶಕಗಳ ಹಿಂದೆಯೇ ತುಳುನಾಡಿನ ಸಾಂಸ್ಕೃತಿಕ ಜಗತ್ತನ್ನು ಹುಡುಕಿಕೊಂಡು ಹೊರಟ ಕೆಲ ನಿರ್ದೇಶಕರ ಸಾಲಿನಲ್ಲಿ ಶಿವಧ್ವಜ್‌ ಶೆಟ್ಟಿ ಕೂಡ ಸೇರುತ್ತಾರೆ. ಅವರ ನಿರ್ದೇಶನದ ‘ಇಂಬು’ ಚಿತ್ರ ಇಂಡಿಯನ್‌ ಪನೋರಮ 2025 ಸ್ಪರ್ಧೆಗೆ ಆಯ್ಕೆಗೊಂಡಿದೆ. ಚಿತ್ರ ಹಾಗೂ ತಮ್ಮ ಸಿನಿಪಯಣ ಕುರಿತು ಅವರು ಮಾತನಾಡಿದ್ದಾರೆ. 

‘ನವೆಂಬರ್‌ 20ರಿಂದ ಪ್ರಾರಂಭಗೊಳ್ಳಲಿರುವ 56ನೇ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಮ್ಮ ತುಳು ಚಿತ್ರ ‘ಇಂಬು’ ಪ್ರದರ್ಶನಗೊಳ್ಳಲಿದೆ. ಈ ಸಲದ ಇಂಡಿಯನ್‌ ಪನೋರಮ 2025 ಸ್ಪರ್ಧೆಗೆ ಕನ್ನಡದ ‘ವನ್ಯ’, ‘ಸು ಫ್ರಂ ಸೋ’ ಹಾಗೂ ತುಳುವಿನಿಂದ ನಮ್ಮ ಸಿನಿಮಾ ಆಯ್ಕೆಗೊಂಡಿದೆ. ಕಡಲು, ಕರಾವಳಿ, ಪ್ರಕೃತಿ, ದರ್ಶನ ಪಾತ್ರಿ ಮುಂತಾದ ವಿಷಯಗಳನ್ನು ಹೊಂದಿರುವ ಚಿತ್ರವಿದು. ದೇವರು ಮೈಮೇಲೆ ಅವಹಾನೆಗೊಂಡು ಭವಿಷ್ಯ ನುಡಿಯುವವರಿಗೆ ದರ್ಶನ ಪಾತ್ರಿಗಳು ಎನ್ನುತ್ತೇವೆ. ಅಂಥ ಓರ್ವ ಪಾತ್ರಿಯ ಬದುಕಿನಲ್ಲಿ ನಡೆಯುವ ಘಟನೆಗಳೇ ನಮ್ಮ ಚಿತ್ರದ ಕಥಾವಸ್ತು’ ಎಂದು ಮಾತು ಪ್ರಾರಂಭಿಸಿದರು ಶಿವಧ್ವಜ್‌. 

ಚಿತ್ರರಂಗದಲ್ಲಿ ಮೂರು ದಶಕಗಳನ್ನು ಪೂರೈಸಿರುವ ಅವರು ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಐದು ಭಾಷೆಗಳ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದಾರೆ. ಈತನಕ ಆರು ಸಿನಿಮಾಗಳನ್ನು ನಿರ್ದೇಶಿಸಿದ್ದು, ಇವರ ‘ಗಗ್ಗರ’ ಚಿತ್ರಕ್ಕೆ 2008ರಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿತ್ತು. 

‘ಚಿತ್ರದಲ್ಲಿ ತುಳುನಾಡಿನ ಸಂಸ್ಕೃತಿ ಇದೆ. ಜತೆಗೆ ಇಂದಿನ ತಂತ್ರಜ್ಞಾನ ಬೆಸೆದುಕೊಂಡಿದೆ. ಮೊಬೈಲ್‌ ಬಳಕೆ ಗೊತ್ತಿಲ್ಲದ ದರ್ಶನ ಪಾತ್ರಿಗೆ ಭಕ್ತರೊಬ್ಬರಿಂದ ಮೊಬೈಲ್‌ ಲಭಿಸುತ್ತದೆ. ಆ ಮೊಬೈಲ್‌ ಬಳಕೆ ಚಟವಾಗಿ ಪಾತ್ರಿ ಆಪತ್ತಿಗೆ ಸಿಲುಕಿಕೊಳ್ಳುತ್ತಾರೆ. ಯಾವ ರೀತಿ ಆಪತ್ತು? ಅದರಿಂದ ಅವರ ಬದುಕಿನಲ್ಲಿ ಏನೆಲ್ಲ ಆಗುತ್ತದೆ ಎಂಬುದೇ ಒಟ್ಟಾರೆ ಚಿತ್ರ. ಇಲ್ಲಿ ಸಮುದ್ರವೂ ಒಂದು ಪ್ರಮುಖ ಪಾತ್ರವಾಗಿರುತ್ತದೆ. ಬೆಂಗಳೂರು, ಕೋಲ್ಕತ ಚಿತ್ರೋತ್ಸವಗಳಲ್ಲಿ ಈ ಚಿತ್ರ ಈಗಾಗಲೇ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ’ ಎಂದರು. 

ADVERTISEMENT
ಶಿವಧ್ವಜ್‌ ಶೆಟ್ಟಿ

ತುಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ನವೀನ್‌ ಪಡೀಲ್‌ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನೋಯ್‌ ಜೋಸೆಫ್‌ ಸಂಗೀತ, ಸುರೇಶ್‌ ಭೈರಸಂದ್ರ ಛಾಯಾಚಿತ್ರಗ್ರಹಣ, ಗಣೇಶ್‌ ನಿರ್ಚಾಲ್‌ ಸಂಕಲನ ಚಿತ್ರಕ್ಕಿದೆ.

‘ಗಟ್ಟಿಯಾದ ಕಥೆಗಳನ್ನು ಹೊಂದಿರುವ, ನಮ್ಮ ಬದುಕಿನ ಮೂಲ ಬೇರುಗಳನ್ನು ನೆನಪಿಸುವ ಚಿತ್ರಗಳನ್ನು ಜನ ಇಷ್ಟಪಡುತ್ತಿದ್ದಾರೆ. ಉತ್ತಮ ಕಾಂಟೆಂಟ್‌ ಹೊಂದಿರುವ ಚಿತ್ರಗಳ ಯುಗವಿದು. ಆ ರೀತಿ ಕಥೆಗಳನ್ನು ಉತ್ತಮ ಬಜೆಟ್‌ನಲ್ಲಿ ಮಾಡಿದಾಗ ಕಮರ್ಷಿಯಲ್‌ ಚಿತ್ರವಾಗುತ್ತದೆ. ಅಚ್ಚುಕಟ್ಟಾದ ಬಂಡವಾಳದೊಂದಿಗೆ ಮಾಡಿದರೆ ಕಲಾತ್ಮಕ ಚಿತ್ರವಾಗುತ್ತದೆ. ಕಮರ್ಷಿಯಲ್‌ ಚಿತ್ರ ಮಾಡುವ ಇರಾದೆಯಿದೆ. ಆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ’ ಎಂದು ಮಾತಿಗೆ ವಿರಾಮವಿತ್ತರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.