ADVERTISEMENT

Interview | ಒಂದೇ ರೀತಿ ಪಾತ್ರ ಮಾಡುವುದು ಇಷ್ಟವಿಲ್ಲ: ವಿನಯ್‌ ರಾಜ್‌ಕುಮಾರ್‌

ವಿನಾಯಕ ಕೆ.ಎಸ್.
Published 21 ಮಾರ್ಚ್ 2025, 0:15 IST
Last Updated 21 ಮಾರ್ಚ್ 2025, 0:15 IST
   

ವಿನಯ್‌ ರಾಜ್‌ಕುಮಾರ್‌ ನಟನೆಯ ‘ಅಂದೊಂದಿತ್ತು ಕಾಲ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಜೊತೆಗೆ, ದುನಿಯಾ ವಿಜಯ್‌ ನಿರ್ದೇಶನದ ‘ಸಿಟಿ ಲೈಟ್ಸ್‌’ ಚಿತ್ರದಲ್ಲಿ ನಟಿಸುತ್ತಿರುವ ಅವರು, ತಮ್ಮ ಸಿನಿ ಪಯಣ ಕುರಿತು ಮಾತನಾಡಿದ್ದಾರೆ.

‘ಅಂದೊಂದಿತ್ತು ಕಾಲ’ ಯಾವ ಜಾನರ್‌ನ ಸಿನಿಮಾ?

ನಿರ್ದೇಶಕನ ಬದುಕಿನ ಕಥೆ ಹೇಳುವ ಚಿತ್ರ. ಸಾಕಷ್ಟು ಜನ ನಿರ್ದೇಶಕರಾಗಬೇಕು ಎಂದುಕೊಂಡು ಚಿತ್ರೋದ್ಯಮಕ್ಕೆ ಬರುತ್ತಾರೆ. ಆದರೆ ಇಲ್ಲಿನ ಕಥೆ ಬೇರೆಯೇ ಇರುತ್ತದೆ. ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಾರೆ. ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಏನೇನೋ ಸಂಘರ್ಷಗಳು ನಡೆಯುತ್ತವೆ. ವೃತ್ತಿಯಲ್ಲಿ ಮಾತ್ರವಲ್ಲದೆ ಬದುಕಿನ ಸಂಘರ್ಷದ ಕಥೆಯೂ ತೆರೆದುಕೊಳ್ಳುತ್ತದೆ.

ADVERTISEMENT

ಚಿತ್ರದ ಟೀಸರ್‌ ಪ್ರೇಮಕಥೆಯ ಸುಳಿವು ನೀಡುತ್ತಿದೆಯಲ್ಲಾ?

ಹೌದು, ಬದುಕಿನ ಹೋರಾಟದ ಜೊತೆಗೆ ಒಂದು ಸುಮಧುರ ಪ್ರೇಮಕಥೆಯೂ ನಡೆಯುತ್ತದೆ. ಸಂಘರ್ಷ, ಪ್ರೀತಿ, ನಗು ಎಲ್ಲವನ್ನೂ ಹೊಂದಿರುವ ಕೌಟಂಬಿಕ ಮನರಂಜನೆ ಚಿತ್ರವಿದು. 

‘ಗ್ರಾಮಾಯಣ’ ಚಿತ್ರ ಯಾವ ಹಂತದಲ್ಲಿದೆ?

20 ದಿನದ ಚಿತ್ರೀಕರಣ ಬಾಕಿ ಇದೆ. ಈಗ ಅದರ ಚಿತ್ರೀಕರಣದ ಸಿದ್ಧತೆ ನಡೆಯುತ್ತಿದೆ. ಏಪ್ರಿಲ್‌ನಲ್ಲಿ ಚಿತ್ರೀಕರಣ ಪೂರ್ಣಗೊಂಡು ಈ ವರ್ಷ ತೆರೆಗೆ ಬರಲಿದೆ.

ದುನಿಯಾ ವಿಜಯ್‌ ನಿರ್ದೇಶನದ ‘ಸಿಟಿ ಲೈಟ್ಸ್‌’ನಲ್ಲಿ ನಿಮ್ಮ ಪಾತ್ರ...

ಪಾತ್ರ ಕುರಿತು ಈಗಲೇ ಹೆಚ್ಚು ಹೇಳುವುದು ಕಷ್ಟ. ಒಂದು ಹಂತದ ಚಿತ್ರೀಕರಣ ಮುಗಿದಿದೆ. ಈಗ ನಾನು ಇಲ್ಲದ ಭಾಗದ ಚಿತ್ರೀಕರಣ ನಡೆಯುತ್ತಿದೆ. ಇಂದೊಂದು ‘ರಾ’ ಮಾದರಿಯ ಸಿನಿಮಾ. ಒಂದು ನಗರ ಸಾವಿರಾರು ಜನರನ್ನು ಕೈಬೀಸಿ ಕರೆಯುತ್ತದೆ. ಹಾಗೆ ಮಹಾನಗರಕ್ಕೆ ಬದುಕು ಹುಡುಕಿಕೊಂಡು ಬೇರೆ ಊರಿನಿಂದ ಬಂದ ಇಬ್ಬರ ಕಥೆಯಿದು. ಬೇರೆ ಊರುಗಳಿಂದ ಕರ್ನಾಟಕಕ್ಕೆ ಬರುತ್ತಾರೆ. ಅವರೆಲ್ಲ ಎಲ್ಲಿಗೆ ಹೋಗುತ್ತಾರೆ, ಅವರ ಬದುಕಿನ ಪಯಣವೇನು, ಎಂಬಿತ್ಯಾದಿ ಸಂಗತಿಗಳಿವೆ.

ನಿಮ್ಮ ಪ್ರತಿ ಸಿನಿಮಾವು ಭಿನ್ನವಾಗಿರುತ್ತದೆ. ಆದರೂ ಜನರಿಂದ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಸಿಗುತ್ತಿಲ್ಲ ಏಕೆ?

ಜನ ಇವತ್ತು ತುಂಬ ಅಥೆಂಟಿಕ್‌ ಆದ ಸಿನಿಮಾಗಳನ್ನು ಬಯಸುತ್ತಾರೆ. ಅಂಥ ಕಥೆಯೊಂದಿಗೆ ಒಳ್ಳೆಯ ಸಿನಿಮಾ ಮಾಡಿದರೆ ಜನ ಒಪ್ಪಿಕೊಳ್ಳುತ್ತಾರೆ. ಮಾಮೂಲಿ ಆ್ಯಕ್ಷನ್‌ ಸಿನಿಮಾಗಳು ಬೇಡವಾಗಿವೆ. ಜೊತೆಗೆ ಚಿತ್ರದ ಬಿಡುಗಡೆ, ಪ್ರಚಾರ ಇನ್ನಿತರ ಅಂಶಗಳು ಚಿತ್ರದ ಯಶಸ್ಸಿನ ಮೇಲೆ ಪರಿಣಾಮ ಬೀರುತ್ತವೆ.

ವಿಭಿನ್ನ ರೀತಿಯ ಕಥೆಗಳನ್ನು ಆಯ್ದುಕೊಳ್ಳಲು ಕಾರಣ...

ನನಗೆ ಒಂದೇ ರೀತಿಯ ಪಾತ್ರಗಳನ್ನು ಮಾಡುವುದು ಏಕತಾನತೆ ಅನ್ನಿಸುತ್ತದೆ. ಒಂದು ಭಿನ್ನ ಪಾತ್ರದ ಮೂಲಕ ನಾವು ಬದುಕಿನಲ್ಲಿಯೂ ಒಂದಷ್ಟು ಕಲಿಯುತ್ತೇವೆ. ಈ ರೀತಿ ಸಿನಿಮಾಗಳನ್ನೇ ಮಾಡುವುದರಿಂದ ನನಗೆ ಬರುವ ಕಥೆಗಳು ಹಾಗೇ ಇರುತ್ತವೆ. ಭಿನ್ನ ರೀತಿಯ ಕಥೆಗಳನ್ನು ಹೊಂದಿರುವವರು ಮಾತ್ರ ಬಂದು ಕಥೆ ಹೇಳುತ್ತಾರೆ. ಈ ಕಾರಣಕ್ಕೂ ವಿಭಿನ್ನ ಸಿನಿಮಾಗಳು ಸಿಗುತ್ತಿವೆ. ನಟನಾಗಿ ಪ್ರಯೋಗಗಳನ್ನು ಮಾಡಬೇಕು. ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಬೇಕು. ಎಲ್ಲ ರೀತಿಯಿಂದಲೂ ಇದೊಂದು ವಿಶಿಷ್ಟ ಅನುಭವ.

ಹೊಸ ಚಿತ್ರಗಳನ್ನು ಒಪ್ಪಿಕೊಂಡಿರುವಿರಾ?

ಒಂದು ಕಥೆ ಚರ್ಚೆ ಹಂತದಲ್ಲಿದೆ. ಅದನ್ನು ಹೊರತುಪಡಿಸಿ ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಇರುವ ಸಿನಿಮಾಗಳನ್ನು ಪೂರ್ಣಗೊಳಿಸುವುದರತ್ತ ಗಮನಹರಿಸಿರುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.