ADVERTISEMENT

ಜೇಮ್ಸ್ ಬಾಂಡ್‌ ಪಾತ್ರದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ನಟ ಡೇನಿಯಲ್ ಕ್ರೇಗ್

ಐಎಎನ್ಎಸ್
Published 25 ಸೆಪ್ಟೆಂಬರ್ 2021, 6:00 IST
Last Updated 25 ಸೆಪ್ಟೆಂಬರ್ 2021, 6:00 IST
ಡೇನಿಯಲ್ ಕ್ರೇಗ್
ಡೇನಿಯಲ್ ಕ್ರೇಗ್   

ಬೆಂಗಳೂರು: ಜೇಮ್ಸ್ ಬಾಂಡ್ ಪಾತ್ರದ ಮೂಲಕ ಸಿನಿಜಗತ್ತಿನಲ್ಲಿ ಜನಪ್ರಿಯವಾಗಿರುವ ನಟ ಡೇನಿಯಲ್ ಕ್ರೇಗ್ ಅವರು ಜೇಮ್ಸ್ ಬಾಂಡ್ 007 ಪಾತ್ರದಿಂದ ನಿವೃತ್ತಿಯಾಗುತ್ತೇನೆ ಎಂದು ಕಳೆದ ವರ್ಷ ಘೋಷಿಸಿದ್ದರು.

ಸದ್ಯ ನಿರ್ಮಾಣವಾಗುತ್ತಿರುವ ‘ನೋ ಟೈಮ್ ಟು ಡೈ‘ ಜೇಮ್ಸ್ ಬಾಂಡ್ ಸಿನಿಮಾದ ನಂತರ ಅವರು ಆ ಪಾತ್ರಕ್ಕೆ ವಿದಾಯ ಹೇಳಲಿದ್ದಾರೆ.

ಜಗತ್ತಿನಾದ್ಯಂತ ಜೇಮ್ಸ್ ಬಾಂಡ್ ಪಾತ್ರದ ಮೂಲಕವೇ ಜನಪ್ರಿಯರಾಗಿರುವ ಡೇನಿಯಲ್ ಕ್ರೇಗ್ ಅವರು ಕಾರ್ಯಕ್ರಮವೊಂದರಲ್ಲಿ ಆ ಪಾತ್ರದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ADVERTISEMENT

‘ಜೇಮ್ಸ್ ಬಾಂಡ್ ಪಾತ್ರ ನನ್ನ ಜೀವನದಲ್ಲಿ ನನಗೆ ಎಲ್ಲವೂ. ಅದು ನನಗೆ ತುಂಬಾ ಭಾವನಾತ್ಮಕವಾದದ್ದು‘ ಎಂದು ಅವರು ಹೇಳಿದ್ದಾರೆ.

‘ಬಾಂಡ್ ಸಿನಿಮಾಗಳು ಪದೇ ಪದೇ ಆಗುವುದಿಲ್ಲ. ಆದ್ದರಿಂದ ಈ ಅವಕಾಶವು ನನ್ನ ವೃತ್ತಿಜೀವನದ ದೊಡ್ಡ ವಿಷಯವಾಗಿದೆ, ಹೀಗಾಗಿ ಇದು ನನಗೆ ತುಂಬಾ ಭಾವನಾತ್ಮಕವಾಗಿದೆ. ನಾನು ಆ ಪಾತ್ರದಿಂದ ನಿರ್ಗಮಿಸುತ್ತಿರುವುದಕ್ಕೆ ಸಂತೃಪ್ತಿ ಇದೆ. ಅದನ್ನು ಮಾಡಲು ನನಗೆ ಅವಕಾಶ ನೀಡಿದ ನಿರ್ಮಾಪಕರಿಗೆ ನಾನು ಆಭಾರಿಯಾಗಿದ್ದೇನೆ. ಆದರೆ, ನಾನು ಖಂಡಿತ ಅದನ್ನು ‘ಮಿಸ್‘ ಮಾಡಿಕೊಳ್ಳುತ್ತೇನೆ‘ ಎಂದು ಹೇಳಿದ್ದಾರೆ.

‘ಮುಂದೆ ಹೊಸ ನಟ ಜೇಮ್ಸ್ ಬಾಂಡ್ ಪಾತ್ರಕ್ಕೆ ಬಣ್ಣ ಹಚ್ಚಿದಾಗ ನಾನು ನಂಬಲಾಗದಷ್ಟು ಹೊಟ್ಟೆ ಕಿಚ್ಚು ಪಡುತ್ತೇನೆ‘ ಎಂದು ಹಾಸ್ಯಭರಿತವಾಗಿ ಡೇನಿಯಲ್ ಕ್ರೇಗ್ ಹೇಳಿದ್ದಾರೆ.

ಡೇನಿಯಲ್ ಕ್ರೇಗ್ ಅವರಿಗೆ ಇತ್ತೀಚೆಗೆ ಬ್ರಿಟನ್ ಸರ್ಕಾರ ಅತ್ಯುನ್ನತ ‘ಆನರರಿ ಕಮಾಂಡರ್‘ ಪದವಿ ನೀಡಿ ಗೌರವಿಸಿದೆ.

1953 ರಲ್ಲಿ ಬ್ರಿಟಿಷ್ ಪತ್ರಕರ್ತ ಹಾಗೂ ಕಾದಂಬರಿಕಾರ ಲ್ಯಾನ್ ಫ್ಲೆಮಿಂಗ್ ಅವರು ಸೃಷ್ಟಿಸಿದ ಕಾಲ್ಪನಿಕ ಗೂಡಚರ್ಯೆ ಪಾತ್ರವೇ ಜೇಮ್ಸ್ ಬಾಂಡ್ 007. ಗೂಢಚರ್ಯೆ ಜಗತ್ತಿನ ಬೆರುಗು ಹುಟ್ಟಿಸುವ ಕಥೆಗಳನ್ನು ಈ ಸರಣಿಯ ಸಿನಿಮಾಗಳು ಹೊಂದಿರುತ್ತಿದ್ದವು. ಒಟ್ಟು ಇಲ್ಲಿಯವರೆಗೆ 24 ಜೇಮ್ಸ್ ಬಾಂಡ್ ಸರಣಿಯ ಸಿನಿಮಾಗಳು ತರೆಗೆ ಬಂದಿವೆ.

ಇತ್ತೀಚೆಗೆ ಜೇಮ್ಸ್ ಬಾಂಡ್ ಸರಣಿಯ ಸ್ಪೆಕ್ಟರ್ 2015 ರಲ್ಲಿ ಬಿಡುಗಡೆಯಾಗಿತ್ತು. ಇದೀಗ ಡೇನಿಯಲ್ ಕ್ರೇಗ್ ಅಭಿನಯದ ‘ನೋ ಟೈಮ್ ಟು ಡೈ‘ ಸಿನಿಮಾ ನಿರ್ಮಾಣವಾಗುತ್ತಿದೆ. ಇದು ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾ ಲಾಕ್‌ಡೌನ್‌ಗಳ ಕಾರಣ ವಿಳಂಬವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.