ADVERTISEMENT

ಜವಾನ್‌, ಡಂಕಿ ತಮ್ಮ ಮುಂದಿನ ಸಿನಿಮಾ : ಶಾರುಖ್‌ ಖಾನ್‌

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 9:48 IST
Last Updated 20 ಫೆಬ್ರುವರಿ 2023, 9:48 IST
   

‘ಪಠಾಣ್‌’ ಸಿನಿಮಾದ ಭರ್ಜರಿ ಗೆಲುವಿನ ಖುಷಿಯಲ್ಲಿರುವ ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌, ತಮ್ಮ ಮುಂದಿನ ಎರಡು ಚಿತ್ರಗಳ ಮಾಹಿತಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟನೆಯಿಂದ ಎಂದಿಗೂ ನಿವೃತ್ತಿಯಾಗುವುದಿಲ್ಲ ಎಂಬ ಆಶ್ವಾಸನೆಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

15 ನಿಮಿಷ ತಮ್ಮ ಟ್ವಿಟರ್‌ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುವ ಶಾರುಖ್‌ ಖಾನ್‌, ಸೋಮವಾರ ನಡೆಸಿದ ಸಂವಾದದಲ್ಲಿ ಹಲವಾರು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ‘ಜವಾನ್‌’, ‘ಡಂಕಿ’ ತಮ್ಮ ಮುಂದಿನ ಸಿನಿಮಾ. ಅದರ ನಂತರದ ಸಿನಿಮಾ ಕಥೆಗಳನ್ನು ಇಲ್ಲಿವರೆಗೆ ಕೇಳಿಲ್ಲ. ಈ ಎರಡು ಸಿನಿಮಾಗಳ ಬಿಡುಗಡೆ ನಂತರ ಮುಂದಿನ ಚಿತ್ರದ ಬಗ್ಗೆ ನಿರ್ಧಾರ ಮಾಡುವೆ ಎಂದು ಶಾರುಖ್‌ ಟ್ವೀಟ್‌ ಮಾಡಿದ್ದಾರೆ.

ಅಭಿಮಾನಿಗಳು ಕೇಳಿರುವ ಹಲವಾರು ಪ್ರಶ್ನೆಗಳಿಗೆ ಶಾರುಖ್‌ ಉತ್ತರಿಸಿದ್ದಾರೆ. ಹಲವಾರು ಹಾಸ್ಯಭರಿತ ಪ್ರಶ್ನೆಗಳಿಗೆ ನಗುವಿನ ಚಟಾಕಿ ಹಾರಿಸಿ ಉತ್ತರಿಸಿರುವ ಶಾರುಖ್‌, ಪತ್ನಿ ಗೌರಿ ಖಾನ್‌ ಕುರಿತು, ತಮ್ಮ ಪುತ್ರನ ಗೊಂಬೆ ಸ್ವಚ್ಛಗೊಳಿಸುತ್ತಿರುವ ಕುರಿತು ಮಾತನಾಡಿದ್ದಾರೆ.

ತಮ್ಮ ವಯಸ್ಸಿನ ಕುರಿತು, ಸಿಕ್ಸ್‌ ಪ್ಯಾಕ್‌ ಬಗ್ಗೆ ಶಾರುಖ್‌ ಮಾತನಾಡಿದ್ದಾರೆ. ‘ಪಠಾಣ್‌’ ಚಿತ್ರ ₹1000 ಕೋಟಿ ಗಳಿಕೆ ಕಂಡಿರುವುದನ್ನು ಸೂಚ್ಯವಾಗಿ ಹೇಳಿರುವ ಶಾರುಖ್‌, ಈ ಚಿತ್ರದಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಅದನ್ನು ನೋಡಿ ತಮಗೂ ಖುಷಿಯಾಗಿದೆ ಎಂದು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.