ADVERTISEMENT

ಕ್ಷಮೆ ಕೇಳದಿದ್ದರೆ ಸಿನಿಮಾಗೆ ಅವಕಾಶವಿಲ್ಲ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 14:00 IST
Last Updated 2 ಜೂನ್ 2025, 14:00 IST
ನರಸಿಂಹಲು 
ನರಸಿಂಹಲು    

ಬೆಂಗಳೂರು: ‘ನಟ ಕಮಲ್‌ ಹಾಸನ್‌ ಕ್ಷಮೆ ಕೇಳದೇ ಇದ್ದರೆ ‘ಥಗ್‌ಲೈಫ್‌’ ಸಿನಿಮಾ ಬಿಡುಗಡೆ ಅವಕಾಶ ನೀಡುವುದಿಲ್ಲ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದ್ದಾರೆ. 

ಸೋಮವಾರ ಕನ್ನಡ ಪರ ಸಂಘಟನೆಗಳ ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ಚಿತ್ರರಂಗ ಮಾತ್ರವಲ್ಲದೆ, ಕನ್ನಡ ಪರ ಸಂಘಟನೆಗಳು ಹಾಗೂ ಎಲ್ಲಾ ಪಕ್ಷದ ನಾಯಕರೂ ಕಮಲ್‌ ಹಾಸನ್‌ ಮಾತನ್ನು ಖಂಡಿಸಿದ್ದಾರೆ. ಚಿತ್ರಮಂದಿರಗಳ ಮಾಲೀಕರು, ವಿತರಕರು ಬೇರೆ ಸಿನಿಮಾಗಳನ್ನು ಹಾಕಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಕ್ಷಮೆ ಕೇಳಿದರೂ ತಕ್ಷಣದಲ್ಲೇ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ದೂರು ನೀಡಿದವರ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಕಮಲ್‌ ಹಾಸನ್‌ ದುಬೈನಲ್ಲಿದ್ದಾರೆ. ಮಂಗಳವಾರ(ಜೂನ್‌ 3) ಚೆನ್ನೈಗೆ ಮರಳುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ‘ಥಗ್‌ಲೈಫ್‌’ ಸಿನಿಮಾದ ವಿತರಕರು ಜೂನ್‌ 3ರ ಮಧ್ಯಾಹ್ನದವರೆಗೆ ಸಮಯ ಕೇಳಿದ್ದಾರೆ’ ಎಂದು ನರಸಿಂಹಲು ತಿಳಿಸಿದರು. 

‘ತಮಿಳುನಾಡು ಚಿತ್ರೋದ್ಯಮ ಕಮಲ್‌ ಹಾಸನ್‌ ಪರ ನಿಂತಿದೆ. ಆ ಕೆಲಸ ಇಲ್ಲಿ ಆಗಬೇಕು. ನಮ್ಮ ಕಲಾವಿದರ ಸಂಘಕ್ಕೆ ನಾಡಿನ ಬಗ್ಗೆ ಗೌರವ ಇದ್ದರೆ ಅವರೇ ಮುಂದೆ ಬರಬೇಕು. ಇದು ಎಲ್ಲರ ಕರ್ತವ್ಯ. ರಾಜ್ಯದ ಸ್ವಾಭಿಮಾನದ ಪ್ರಶ್ನೆ ಇದು. ಕಮಲ್‌ ಹಾಸನ್‌ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ತನ್ನ ಈ ನಿರ್ಧಾರದಲ್ಲಿ ವಾಣಿಜ್ಯ ಮಂಡಳಿ ಒಂದು ಹೆಜ್ಜೆಯೂ ಹಿಂದಕ್ಕೆ ಹೋಗಲ್ಲ. ಸಿನಿಮಾದ ಹಂಚಿಕೆದಾರರು ಒಬ್ಬ ಕನ್ನಡಿಗ. ಅವರಿಗೆ ಅನ್ಯಾಯ ಆಗಬಾರದು ಎನ್ನುವ ಉದ್ದೇಶದಿಂದ ಸಮಯ ನೀಡಿದ್ದೇವೆ. ಕಮಲ್‌ ಹಾಸನ್‌ಗಾಗಿ ನಾವು ಕಾಯುತ್ತಿಲ್ಲ’ ಎಂದು ನಿರ್ಮಾಪಕ ಸಾ.ರಾ.ಗೋವಿಂದು ಹೇಳಿದರು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.