ಮುಂಬೈ: ತಮ್ಮ ವಿರುದ್ಧ ಗೀತರಚನೆಕಾರ ಜಾವೇದ್ ಅಖ್ತರ್ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಮಧ್ಯಸ್ಥಿಕೆದಾರರ ಮೂಲಕ ಇತ್ಯರ್ಥಪಡಿಸಿಕೊಂಡಿರುವುದಾಗಿ ಸಂಸದೆ ಹಾಗೂ ನಟಿ ಕಂಗನಾ ರನೌತ್ ತಿಳಿಸಿದ್ದಾರೆ.
ಇವರಿಬ್ಬರೂ ಶುಕ್ರವಾರ ಇಲ್ಲಿನ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಪರಸ್ಪರರ ವಿರುದ್ಧ ಸಲ್ಲಿಸಿದ್ದ ದೂರುಗಳನ್ನು ಹಿಂಪಡೆಯುವ ನಿರ್ಧಾರ ತಿಳಿಸಿದರು.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಂಗನಾ, ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನಲ್ಲಿ ನನ್ನ ಹೆಸರನ್ನು ಎಳೆದು ತರುವ ಮೂಲಕ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಅಖ್ತರ್ ಅವರು 2020ರ ಜುಲೈನಲ್ಲಿ ಕಂಗನಾ ವಿರುದ್ಧ ದೂರು ದಾಖಲಿಸಿದ್ದರು.
ಬಳಿಕ ಕಂಗನಾ ಕೂಡ ಅಖ್ತರ್ ವಿರುದ್ಧ ದೂರು ದಾಖಲಿಸಿದ್ದರು. ಅವರ ನಿವಾಸಕ್ಕೆ ಭೇಟಿ ನೀಡಿದಾಗ ನನ್ನನ್ನು ಬೆದರಿಸಿದರು. ಅಲ್ಲದೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು ಎಂದು ಆರೋಪಿಸಿದ್ದರು.
ಈ ಪ್ರಕರಣವನ್ನು ಆರಂಭದಲ್ಲಿ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಚಾರಣೆ ನಡೆಸಿತ್ತು. 2024ರಲ್ಲಿ, ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ಸಂಸದೆಯಾಗಿ ಆಯ್ಕೆಯಾದ ಬಳಿಕ, ಈ ಪ್ರಕರಣವನ್ನು ಸಂಸದರು ಮತ್ತು ಶಾಸಕರ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಮಧ್ಯಸ್ಥಿಕೆ ವರದಿಯಲ್ಲಿ ಕಂಗನಾ, 2020ರ ಜುಲೈ 19 ರಂದು ನಡೆದ ಸಂದರ್ಶನದಲ್ಲಿ ನಾನು ನೀಡಿದ ಹೇಳಿಕೆಗಳು ತಪ್ಪು ತಿಳಿವಳಿಕೆಯ ಪರಿಣಾಮವಾಗಿವೆ, ಅವರಿಗೆ ಉಂಟಾದ ಅನಾನುಕೂಲತೆಗಾಗಿ ನಾನು ಕ್ಷಮೆಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ನೀಡಿದ ಎಲ್ಲಾ ಹೇಳಿಕೆಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ ಮತ್ತು ಭವಿಷ್ಯದಲ್ಲಿ ಅಂತಹ ಹೇಳಿಕೆಗಳನ್ನು ನೀಡುವುದಿಲ್ಲ ಎಂದಿದ್ದಾರೆ.
ಬಾಂದ್ರಾದ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಒಂದು ಗಂಟೆ ಸಂಧಾನ ನಡೆಯಿತು. ಈ ವೇಳೆ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು ಎಂದು ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಿಕಿ ಮತ್ತು ಅಖ್ತರ್ ಪರ ವಕೀಲ ಜಯ್ ಕುಮಾರ್ ಭಾರದ್ವಾಜ್ ಹೇಳಿದ್ದಾರೆ.
ನ್ಯಾಯಾಲಯಕ್ಕೆ ಹಾಜರಾದ ನಂತರ, ತಾವು ಅಖ್ತರ್ ಜೊತೆ ನಿಂತಿರುವ ಫೊಟೋವನ್ನು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕಂಗನಾ ಹಂಚಿಕೊಂಡಿದ್ದಾರೆ. ತಮ್ಮ ನಡುವಿನ ಕಾನೂನು ಹೋರಾಟಕ್ಕೆ ತೆರೆಬಿದ್ದಿದೆ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.