ಮುಂಬೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಕಂಗನಾ ಅವರಿಗೆ ಬಾಲಿವುಡ್‌ನ ಖ್ಯಾತನಾಮರಿಂದ ರಹಸ್ಯ ಕರೆ ಮತ್ತು ಸಂದೇಶಗಳು ಬರುತ್ತಿವೆಯಂತೆ.
ಹೌದು, ಈ ಬಗ್ಗೆ ಖುದ್ದು ಕಂಗನಾ ಅವರೇ ಬುಧವಾರ ತಡರಾತ್ರಿ ಟ್ವೀಟ್ ಮಾಡಿದ್ದಾರೆ. ಕಳೆದ ತಿಂಗಳು ಬಿಡುಗಡೆಯಾಗಿರುವ 'ತಲೈವಿ' ಚಿತ್ರದ ಟ್ರೈಲರ್‌ಗೆ ಜನರಿಂದ ಅಷ್ಟೇ ಅಲ್ಲದೇ, ಬಾಲಿವುಡ್‌ನ ಸ್ಟಾರ್‌ಗಳಿಂದಲೂ ಹೊಗಳಿಕೆ ವ್ಯಕ್ತವಾಗಿದೆ. ಆದರೆ, ಈ ಹೊಗಳಿಕೆಯ ಕರೆ ಮತ್ತು ಸಂದೇಶಗಳು ರಹಸ್ಯವಾಗಿವೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.
'ನನ್ನನ್ನು ಬಹಿರಂಗವಾಗಿ ಹೊಗಳಿದರೂ ತೊಂದರೆಗೆ ಸಿಲುಕುತ್ತೇವೆ ಎಂದು ಬಾಲಿವುಡ್‌ನ ಜನರು ಭಾವಿಸಿದ್ದಾರೆ. ಬಾಲಿವುಡ್‌ನಲ್ಲಿ ಅಂತಹ ಸಂದಿಗ್ಧ ವಾತಾವರಣವಿದೆ. ತಲೈವಿ ಚಿತ್ರದ ಟ್ರೈಲರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಕರೆ ಹಾಗೂ ಸಂದೇಶಗಳು ಬರುತ್ತಿವೆ. ಆದರೆ, ಅವು ರಹಸ್ಯವಾಗಿವೆ. ಅಕ್ಷಯ್ ಕುಮಾರ್ ಅವರಂತ ತಾರೆಯರೂ ಸಹ ರಹಸ್ಯವಾಗಿ ಹೊಗಳಿದ್ದಾರೆ. ಆಲಿಯಾ ಅಥವಾ ದೀಪಿಕಾ ಅವರನ್ನು ಹೊಗಳಿದಂತೆ ನನ್ನನ್ನು ಬಹಿರಂಗವಾಗಿ ಹೊಗಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದು ಸಿನೆಮಾ ಮಾಫಿಯಾದ ಭಯೋತ್ಪಾದನೆ' ಎಂದು ಕಂಗನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಜಯಲಲಿತಾ ಅವರ ಜೀವನಕಥೆ ಆಧರಿಸಿದ ಚಿತ್ರ ‘ತಲೈವಿ’ಯ ತಮಿಳು, ತೆಲುಗು ಮತ್ತು ಹಿಂದಿ ಅವತರಣಿಕೆಯ ಟ್ರೈಲರ್ ಬಿಡುಗಡೆಯಾಗಿದೆ. ರಾಜಕೀಯ ನಾಯಕಿ ಜಯಾ ಪಾತ್ರದಲ್ಲಿ ಕಾಣಿಸಿಕೊಂಡು ಕಂಗನಾ ಮಿಂಚಿದ್ದಾರೆ.
ಜಯಲಲಿತಾ ಅವರ ಜೀವನಗಾಥೆ ಆದ್ದರಿಂದ ಚಿತ್ರದ ಬಗ್ಗೆ ಕುತೂಹಲವೂ ಹೆಚ್ಚಿದೆ. ಚಿತ್ರ ಏಪ್ರಿಲ್ 23ಕ್ಕೆ ಬಿಡುಗಡೆ ಆಗಲಿದೆ. ಕಂಗನಾ ರನೌಟ್ ಜೊತೆಗೆ ಅರವಿಂದ್ ಸ್ವಾಮಿ, ನಾಸರ್, ಭಾಗ್ಯಶ್ರೀ, ಸಮುತ್ರಕನಿ, ಮಧುಬಾಲಾ ತಾರಾಗಣದಲ್ಲಿದ್ದಾರೆ. ವಿಜಯ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಷ್ಣುವರ್ಧನ್ ಇಂದೂರಿ ಮತ್ತು ಶೈಲೇಶ್ ಆರ್. ಸಿಂಗ್ ಚಿತ್ರದ ನಿರ್ಮಾಪಕರು. ಜಿ.ವಿ. ಪ್ರಕಾಶ್ ಅವರ ಸಂಗೀತವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.