ADVERTISEMENT

ಭಾರವಾದ ಹೃದಯದೊಂದಿಗೆ ಮುಂಬೈನಿಂದ ಹೊರಟಿದ್ದೇನೆ: ಕಂಗನಾ ರನೌತ್

ಪಿಟಿಐ
Published 14 ಸೆಪ್ಟೆಂಬರ್ 2020, 7:12 IST
Last Updated 14 ಸೆಪ್ಟೆಂಬರ್ 2020, 7:12 IST
ನಟಿ ಕಂಗನಾ ರನೌತ್
ನಟಿ ಕಂಗನಾ ರನೌತ್    

ಮುಂಬೈ: ಭಾನುವಾರ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ನಟಿ ಕಂಗನಾ ರನೌತ್ ಅವರು ಭಾರವಾದ ಹೃದಯದೊಂದಿಗೆ ಮುಂಬೈನಿಂದ ಹೊರಟಿರುವುದಾಗಿ ತಿಳಿಸಿದ್ದು, ಮುಂಬೈ ಅನ್ನು ಪಿಒಕೆಗೆ ಹೋಲಿಸಿದ್ದು ಸರಿಯಾಗಿಯೇ ಇದೆ ಎಂದಿದ್ದಾರೆ.

ನಟಿ ಕಂಗನಾ, ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದು ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನಾದೊಂದಿಗೆ ವಾಕ್ಸಮರಕ್ಕೆ ಕಾರಣವಾಗಿತ್ತು. ಕಳೆದ ವಾರವಷ್ಟೇ ತನ್ನ ತವರು ರಾಜ್ಯ ಹಿಮಾಚಲ ಪ್ರದೇಶದಿಂದ ನಗರಕ್ಕೆ ಬಂದಿದ್ದರು.

ಅದೇ ದಿನ ಸೆ.9ರಂದು ಇಲ್ಲಿನ ಅವರ ಕಚೇರಿಯ ಕೆಲ ಭಾಗಗಳನ್ನು ಶಿವಸೇನೆ ನೇತೃತ್ವದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) 'ಅಕ್ರಮ' ನಿರ್ಮಾಣ ಎಂದು ಆರೋಪಿಸಿ ನೆಲಸಮಮಾಡಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾರವಾದ ಹೃದಯದಿಂದ ಮುಂಬೈನಿಂದ ಹೊರಟಿದ್ದೇನೆ. ಈ ದಿನಗಳಲ್ಲಿ ನಿರಂತರ ದಾಳಿ ಮತ್ತು ನಿಂದನೆಗಳು ಮತ್ತು ಕಚೇರಿಯನ್ನು ನೆಲಕ್ಕುರುಳಿಸಿದ ನಂತರ ನನ್ನ ನಿವಾಸವನ್ನು ಹೊಡೆಯಲು ಯತ್ನಿಸಿದ ಎಲ್ಲದರಿಂದಲೂ ನಾನು ಭಯಭೀತಗೊಂಡಿದ್ದೆ. ನನ್ನ ಸುತ್ತಲೂ ಭದ್ರತೆಯನ್ನು ಒದಗಿಸಿದೆ. ಪಿಒಕೆ ಬಗ್ಗೆ ನನ್ನ ಹೋಲಿಕೆಯು ಸರಿಯಾಗಿತ್ತು ಎಂದು ಬರೆದಿದ್ದಾರೆ.

ADVERTISEMENT

ಆಡಳಿತ ಪಕ್ಷವನ್ನು ಗುರಿಯಾಗಿಸಿಕೊಂಡು 33 ವರ್ಷದ ನಟಿ, ರಕ್ಷಕರು ತಮ್ಮನ್ನು ತಾವು 'ವಿದ್ವಾಂಸರು' ಎಂದು ಘೋಷಿಸಿಕೊಂಡಿದ್ದಾರೆ ಮತ್ತು ಪ್ರಜಾಪ್ರಭುತ್ವವನ್ನು ಕೆಡವಲು ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ದುರ್ಬಲ ಎಂದು ಅವರು ಭಾವಿಸುವುದು ತಪ್ಪು. ಮಹಿಳೆಗೆ ಬೆದರಿಕೆಯೊಡ್ಡುವ ಮತ್ತು ನಿಂದಿಸುವ ಮೂಲಕ ಅವರು ತಮ್ಮ ವ್ಯಕ್ತಿತ್ವವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

ತಮಗಾದ ಅನ್ಯಾಯವನ್ನು ತಿಳಿಸಿ ನ್ಯಾಯ ಕೋರಲು ಭಾನುವಾರ ಕಂಗನಾ, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ಚರ್ಚಿಸಿದ್ದರು.

ಕಳೆದ ಜೂನ್‌ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರು ನಿಧನರಾದ ನಂತರ ಚಿತ್ರರಂಗ ಮತ್ತು ಅದರ ಕಾರ್ಯವೈಖರಿಯನ್ನು ನಟಿ ತೀವ್ರವಾಗಿ ಟೀಕಿಸಿದ್ದರು. ಇದು ಆತ್ಮಹತ್ಯೆಯಲ್ಲ ಆದರೆ ಹೊರಗಿನವರನ್ನು ಒಪ್ಪಿಕೊಳ್ಳಲಾಗದ ಉದ್ಯಮವೊಂದರ 'ಯೋಜಿತ ಕೊಲೆ' ಎಂದು ಕಂಗನಾ ಆರೋಪಿಸಿದ್ದರು.

ನಗರದಲ್ಲಿ ನಡೆಯುವ ಡ್ರಗ್ಸ್‌ ಮಾಫಿಯಾ ಮತ್ತು ಸುಶಾಂತ್ ಸಾವಿನ ಪ್ರಕರಣವನ್ನು ನಿರ್ವಹಿಸುವಲ್ಲಿ ಮಹಾರಾಷ್ಟ್ರ ಸರ್ಕಾರವನ್ನು ಗುರಿಯಾಗಿಸಿಕೊಂಡ ಅವರು, ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ-ಕಾಶ್ಮೀರಕ್ಕೆ ಹೋಲಿಸಿದ್ದರು. ಶಿವಸೇನಾ ನಾಯಕ ಸಂಜಯ್ ರಾವುತ್ ಅವರೊಂದಿಗೆ ವಾಕ್ಸಮರ ಉಂಟಾದ ಬಳಿಕ ಕೇಂದ್ರ ಗೃಹ ಸಚಿವಾಲಯವು ಆಕೆಗೆ ವೈ+ ಶ್ರೇಣಿಯ ಭದ್ರತೆಯನ್ನು ಒದಗಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.