ಸಪ್ನಾ ಮತ್ತು ಅಜಯ್ ರಾವ್
ಬೆಂಗಳೂರು: ವಿಚ್ಛೇದನ ವದಂತಿಗಳ ನಡುವೆಯೇ ತಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ನಟ ಕೃಷ್ಣಾ ಅಜಯ್ ರಾವ್ ಮತ್ತು ಅವರ ಪತ್ನಿ ಸಪ್ನಾ, ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ವಿನಂತಿ ಮಾಡಿದ್ದಾರೆ.
ಈ ಬಗ್ಗೆ ಇಬ್ಬರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘ಈ ಸೂಕ್ಷ್ಮ ಸಮಯದಲ್ಲಿ ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಹಾಗೂ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವುದನ್ನು ಅಥವಾ ಹರಡುವುದನ್ನು ದೂರವಿಡುವಂತೆ ತಮ್ಮನ್ನು ವಿನಮ್ರವಾಗಿ ವಿನಂತಿಸುತ್ತೇನೆ’ ಎಂದು ಅಜಯ್ ರಾವ್ ಅವರು ಪೋಸ್ಟ್‌ನಲ್ಲಿ ಮನವಿ ಮಾಡಿದ್ದಾರೆ.
‘ಪ್ರತಿಯೊಂದು ಕುಟುಂಬವೂ ಸವಾಲುಗಳನ್ನು ಎದುರಿಸುತ್ತದೆ. ಅವುಗಳನ್ನು ಖಾಸಗಿಯಾಗಿ ಉಳಿಯುವಂತೆ ಸಹಕರಿಸಿ’ ಎಂದು ಕೋರಿದ್ದಾರೆ.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಪ್ನಾ, ‘ತಾಯಿಯಾಗಿ ನನ್ನ ಮೊದಲ ಜವಾಬ್ದಾರಿ ನನ್ನ ಮಗಳ ಸುರಕ್ಷತೆ, ಗೌರವ ಮತ್ತು ಅವಳ ಭವಿಷ್ಯ. ಅದಕ್ಕಾಗಿ ನಾನು ಪ್ರತಿದಿನ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತಿದ್ದೇನೆ. ಇದು ಸಂಪೂರ್ಣವಾಗಿ ನಮ್ಮ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ್ದಾಗಿದೆ’ ಎಂದು ಹೇಳಿದ್ದಾರೆ.
'ಈ ಹಂತದಲ್ಲಿ ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನು ಪುನರ್ ನಿರ್ಮಿಸಿಕೊಳ್ಳಲು, ದಾಂಪತ್ಯ ಜೀವನದಲ್ಲಿ ಶಾಂತಿ ಮರುಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ’ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಪತಿ ಅಜಯ್ ರಾವ್ ಅವರ ಫೋಟೊಗಳನ್ನು ಅಳಿಸಿ ಹಾಕುವ ಮೂಲಕ ಸಪ್ನಾ ಅವರು ವಿಚ್ಛೇದನದ ಬಗ್ಗೆ ಸುಳಿವು ನೀಡಿದ್ದರು. ಸಪ್ನಾ ಅವರು ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದೂ ವರದಿಯಾಗಿತ್ತು.
ಈ ಬಗ್ಗೆ ತಕ್ಷಣಕ್ಕೆ ಅಜಯ್ ರಾವ್ ಅವರು ಪ್ರತಿಕ್ರಿಯಿಸಿರಲಿಲ್ಲ.
2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜಯ್ ರಾವ್ ಮತ್ತು ಸಪ್ನಾ ದಂಪತಿಗೆ ಒಬ್ಬ ಮಗಳಿದ್ದಾಳೆ.
‘ಎಕ್ಸ್‌ಕ್ಯೂಸ್ ಮಿ’ ಚಿತ್ರದ ಮೂಲಕ ಚಿತ್ರರಂಗದಲ್ಲಿ ಪರಿಚಿತರಾದ ಅಜಯ್ ರಾವ್, ತಾಜ್ ಮಹಲ್, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಅವರು ನಟಿಸಿದ ಯುದ್ಧಕಾಂಡ–2 ಸಿನಿಮಾ ಬಿಡುಗಡೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.