ADVERTISEMENT

ಧ್ರುವ ಸರ್ಜಾ ವಿರುದ್ಧದ ಹಣ ವಂಚನೆ ಆರೋಪ ಸುಳ್ಳು: ನಟನ ಆಪ್ತ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 9:30 IST
Last Updated 9 ಆಗಸ್ಟ್ 2025, 9:30 IST
<div class="paragraphs"><p><strong>ಧ್ರುವ ಸರ್ಜಾ</strong></p></div>

ಧ್ರುವ ಸರ್ಜಾ

   

ಬೆಂಗಳೂರು: ನಟ ಧ್ರುವ ಸರ್ಜಾ ಅವರ ವಿರುದ್ಧದ ಹಣ ವಂಚನೆ ಆರೋಪದಲ್ಲಿ ಹುರುಳಿಲ್ಲ ಎಂದು ಅವರ ಆಪ್ತ ಅಶ್ವಿನ್‌ ಹೇಳಿದ್ದಾರೆ.   

‘ಜಗ್ಗುದಾದ’ ಸಿನಿಮಾ ನಿರ್ದೇಶಕ, ನಿರ್ಮಾಪಕ ರಾಘವೇಂದ್ರ ಹೆಗಡೆ ಎಂಬುವವರು ಮುಂಬೈನ ಅಂಬೋಲಿ ಪೊಲೀಸ್‌ ಠಾಣೆಯಲ್ಲಿ ಧ್ರುವ ಸರ್ಜಾ ಅವರ ವಿರುದ್ಧ ವಂಚನೆ ದೂರು ನೀಡಿದ್ದು, ಈ ದೂರು ಆಧರಿಸಿ ಎಫ್‌ಐಆರ್‌ ದಾಖಲಾಗಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶ್ವಿನ್‌, ‘2018ರಲ್ಲಿ ರಾಘವೇಂದ್ರ ಹೆಗಡೆ ಅವರ ‘ಆರ್‌ಎಚ್‌ ಎಂಟರ್‌ಟೇನ್ಮೆಂಟ್’ ಹಾಗೂ ‘ನಂದಿನಿ ಎಂಟರ್‌ಪ್ರೈಸಸ್‌’ನಿಂದ ಒಟ್ಟು ₹3.10 ಕೋಟಿ ಮುಂಗಡ ಹಣ ನೀಡಿರುತ್ತಾರೆ. ಈ ಪೈಕಿ ಆರ್‌ಎಚ್‌ ಎಂಟರ್‌ಟೇನ್ಮೆಂಟ್‌ ₹2.90 ಕೋಟಿ ನೀಡಿರುತ್ತದೆ. ಇದಾಗಿ ಒಂದು ವರ್ಷದೊಳಗೆ ನಾವು ನಮ್ಮ ಖಾತೆಯಿಂದ ₹20 ಲಕ್ಷವನ್ನು ನಂದಿನಿ ಎಂಟರ್‌ಪ್ರೈಸಸ್‌ಗೆ ಹಿಂದಿರುಗಿಸಿದ್ದೆವು. ಮುಂಗಡ ನೀಡುವಾಗ ಮೂರು ತಿಂಗಳಲ್ಲಿ ಸೈನಿಕನ ಕಥೆ ಇರುವ ಸಿನಿಮಾ ಸಿದ್ಧಪಡಿಸಿಕೊಂಡು ಬರುತ್ತೇನೆ ಎಂದಿರುತ್ತಾರೆ. ಅವರ ಕಚೇರಿ ಮುಂಬೈನಲ್ಲಿದೆ. ನಾವು ಕೇಳಿದಾಗಲೆಲ್ಲ ಕಥೆ ಸಿದ್ಧಪಡಿಸುತ್ತಿದ್ದೇನೆ ಎನ್ನುತ್ತಿದ್ದ ಅವರು, ಸುಮಾರು ನಾಲ್ಕೂವರೆ ವರ್ಷಗಳ ಬಳಿಕ ಎಂದರೆ 2023ರಲ್ಲಿ ಇ–ಮೈಲ್‌ ಮೂಲಕ ಸಿನಿಮಾದ ಮೊದಲಾರ್ಧದ ಕಥೆ ಕಳುಹಿಸಿದ್ದರು. ಆ ಸಂದರ್ಭದಲ್ಲಿ ಮತ್ತೆ ಮೂರು ತಿಂಗಳು ಸಮಯ ಕೇಳುತ್ತಾರೆ. ನಮ್ಮನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಅವರ ಆರೋಪ ಸುಳ್ಳು. ಈ ರೀತಿ ಇದ್ದಿದ್ದರೆ ಅಷ್ಟು ವರ್ಷಗಳ ಬಳಿಕ ಏಕೆ ಕಥೆ ಕಳುಹಿಸಬೇಕಿತ್ತು’ ಎಂದು ಪ್ರಶ್ನಿಸಿದ್ದಾರೆ. 

‘ಒಂದು ದಿನ ಅವರು ಬಂದು ಸಿನಿಮಾದ ಬಜೆಟ್‌ ಹೆಚ್ಚಾಗಲಿದೆ. ಕನ್ನಡದಲ್ಲಿ ಸದ್ಯ ವಹಿವಾಟು ಆಗುತ್ತಿಲ್ಲ, ತೆಲುಗು ಅಥವಾ ಹಿಂದಿಯಲ್ಲಿ ಮಾಡಿ. ಕನ್ನಡದಲ್ಲಿ ಡಬ್‌ ಮಾಡೋಣ ಎಂದಿದ್ದರು. ಇದಕ್ಕೆ ಧ್ರುವ ಸರ್ಜಾ ಅವರು ಒಪ್ಪಿರಲಿಲ್ಲ. ಕನ್ನಡದಲ್ಲೂ ಒಳ್ಳೆಯ ಸಿನಿಮಾ ಮಾಡಿದರೆ ವಹಿವಾಟು ಖಂಡಿತಾ ನಡೆಯುತ್ತದೆ ಎಂದು ಧ್ರುವ ಹೇಳಿದ್ದರು. ಹೀಗಿದ್ದರೂ ಅವರು ಗೊಂದಲದಲ್ಲೇ ಇದ್ದರು. ಇನ್ನೊಮ್ಮೆ ಬಂದು ನಾನು ಮಾಡಬೇಕಾದ ಕಥೆ ‘ಅಮರನ್‌’ ಎಂಬ ಸಿನಿಮಾವಾಗಿ ಬಂದಾಗಿದೆ. ನಿಮ್ಮ ಬಳಿಯೇ ನಿರ್ದೇಶಕರು, ಬರಹಗಾರರು ಇದ್ದರೆ ಹೇಳಿ ಎಂದಿದ್ದರು. ಜೂನ್‌ 28ರಂದು ಬೆಂಗಳೂರಿನಲ್ಲಿ ಭೇಟಿಯಾಗಿ ಅಕ್ಟೋಬರ್‌ನಿಂದ ಡೇಟ್ಸ್‌ ಕೊಡಿ, ತೆಲುಗಿನಲ್ಲಿ ಸಿನಿಮಾ ಮಾಡೋಣ ಎಂದು ಕೇಳಿದ್ದರು. ಕನ್ನಡದಲ್ಲೇ ಮಾಡೋಣ ಎಂದು ಆಗಲೂ ಧ್ರುವ ಹೇಳಿದ್ದರು. ಜುಲೈ 10ಕ್ಕೆ ಅಂಬೋಲಿ ಪೊಲೀಸ್‌ ಠಾಣೆಯಿಂದ ನಮಗೆ ನೋಟಿಸ್‌ ಬಂದಿತು. ನಮಗೆ ₹3.10 ಕೋಟಿ ಕೊಡಬೇಕು, ಅದು ಈಗ ಬಡ್ಡಿ ಎಲ್ಲಾ ಸೇರಿ ₹9.58 ಕೋಟಿ ಆಗಿದೆ. ಇದನ್ನು ವಾಪಸ್‌ ಕೊಡಬೇಕು ಎಂದು ಅದರಲ್ಲಿ ಉಲ್ಲೇಖಿಸಿದ್ದರು. ಈ ಸಂದರ್ಭದಲ್ಲಿ ನಾವು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಕರೆ ಸ್ವೀಕರಿಸಲಿಲ್ಲ. ಅವರಿಗೆ ಸಿನಿಮಾ ಮಾಡಲು ಇಷ್ಟವಿರಲಿಲ್ಲ. ನಾವೇನು ಅವರ ಬಳಿ ಸಾಲ ಪಡೆದಿಲ್ಲ. ಅವರು ಸಿನಿಮಾಗೆ ಮುಂಗಡ ನೀಡಿದ್ದರು. ನಾವು ಸಿನಿಮಾ ಮಾಡಲ್ಲ ಎಂದು ಎಲ್ಲೂ ಹೇಳಿಲ್ಲ. ದುಡ್ಡು ವಾಪಸ್‌ ಕೊಡಲ್ಲ ಎಂದಿಲ್ಲ, ಏಕೆಂದರೆ ಅವರು ಅದನ್ನು ಕೇಳಲಿಲ್ಲ. ನಾವು ಮುಂದೆ ಕಾನೂನು ಪ್ರಕಾರವೇ ಹೆಜ್ಜೆ ಇಡಲಿದ್ದೇವೆ’ ಎಂದಿದ್ದಾರೆ ಅಶ್ವಿನ್‌.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.