
ಕನ್ನಡದ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಸೂಪರ್‌ಸ್ಟಾರ್ ಎನಿಸಿಕೊಂಡವರು ಕಂಟೆಂಟ್ ಸಿನಿಮಾಗಳನ್ನು ಮಾಡಿದ್ದು ಬಹಳ ವಿರಳ. ಮಲಯಾಳದ ದೊಡ್ಡ ನಟರಂತೆ ಕನ್ನಡದಲ್ಲಿಯೂ ಸ್ಟಾರ್‌ಗಳು ಸಿದ್ಧಸೂತ್ರದ ಸಿನಿಮಾಗಳನ್ನು ಬಿಟ್ಟು ಕಥಾ ಪ್ರಧಾನ ಚಿತ್ರಗಳನ್ನು ಮಾಡಬೇಕೆಂಬ ಕೂಗು ಹೆಚ್ಚಾಗಿತ್ತು. ಆ ಕೊರತೆಯನ್ನು ನೀಗಿಸುವ ಚಿತ್ರ ‘45’. ಹಾಗೆ ನೋಡಿದರೆ ಈ ಚಿತ್ರದಲ್ಲಿ ಉಪೇಂದ್ರ ಖಳನಾಯಕ. ಶಿವರಾಜ್‌ಕುಮಾರ್ ಬರುವುದೇ ದ್ವಿತೀಯಾರ್ಧದಲ್ಲಿ. ರಾಜ್ ಬಿ ಶೆಟ್ಟಿಯದ್ದು ಸಾಮಾನ್ಯರಲ್ಲಿ ಸಾಮಾನ್ಯ ಎಂಬಂಥ ಪಾತ್ರ. ಇಷ್ಟಾಗಿಯೂ ಪಾತ್ರವರ್ಗ ಪರಿಪೂರ್ಣ ಎಂಬಂತಿದೆ. ಎಲ್ಲ ಮುಖ್ಯ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯಕ್ಕೆ ಒದಗಿಸಿ ಸಿನಿಮಾವನ್ನು ದಡ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಯಕ ಖಳನಾಯಕನನ್ನು ಸಂಹರಿಸಿ ಅಂತಿಮವಾಗಿ ಸತ್ಯಕ್ಕೆ, ನ್ಯಾಯಕ್ಕೆ ಜಯ ಸಿಗುತ್ತದೆ ಎಂಬುದು ಬಹುತೇಕ ಎಲ್ಲ ಮಾಸ್ ಸಿನಿಮಾಗಳಲ್ಲಿನ ಒಟ್ಟಾರೆ ಕಥೆ. ಅಸುರರ ವಿರುದ್ಧ ಸುರರ ಯುದ್ಧ, ಕೆಡಕಿನ ವಿರುದ್ಧ ಒಳಿತಿನ ಕಾದಾಟ, ಸುಳ್ಳಿನ ವಿರುದ್ಧ ಸತ್ಯದ ಹೋರಾಟ...ಇದರ ಅಂತಿಮ ಫಲಿತಾಂಶ ಎಲ್ಲರಿಗೂ ತಿಳಿದಿರುತ್ತದೆ. ಆ ಗೆಲುವು ಹೇಗೆ ಸಿಗುತ್ತದೆ ಎಂಬುದೇ ಚಿತ್ರ. ಅರ್ಥಾತ್ ಈ ರೀತಿ ವಿಷಯಗಳಲ್ಲಿ ಕಥೆಗಿಂತ ಚಿತ್ರಕಥೆಯೇ ಮುಖ್ಯ. ಸಾವಿನ ಅಧಿಪತಿ ಯಮನ ವಿರುದ್ಧ ಸಶ್ಮಾನದ ಅಧಿಪತಿ ಶಿವನ ಯುದ್ಧ ಎಂಬುದು ‘45’ ಚಿತ್ರದ ಒಟ್ಟಾರೆ ಕಥೆ. ಅದು ಏಕೆ, ಹೇಗೆ ಮತ್ತು ಎಲ್ಲಿ ಎಂಬುದೇ ಚಿತ್ರಕಥೆ. ಗಮನ ಸೆಳೆಯುವ ದೃಶ್ಯ ವೈಭವದೊಂದಿಗೆ ಸಾಮಾಜಿಕ ಕಳಕಳಿಯ ಸಂದೇಶವನ್ನು ದಾಟಿಸುವಲ್ಲಿ ಅರ್ಜುನ್ ಜನ್ಯ ಚೊಚ್ಚಲ ಯತ್ನದಲ್ಲಿಯೇ ಯಶಸ್ವಿಯಾಗಿದ್ದಾರೆ.
ಗರುಡ ಪುರಾಣದ ಸಾರವೇ ಒಟ್ಟಾರೆ ಚಿತ್ರದ ಕಥಾವಸ್ತು. ಸಾಮಾನ್ಯ ಸಾಫ್ಟ್‌ವೇರ್ ಉದ್ಯೋಗಿ ವಿನಯ್ ಮೊಬೈಲ್‌ನಲ್ಲಿ ಮಾತಾಡಿಕೊಂಡು ದ್ವಿಚಕ್ರ ವಾಹನ ಓಡಿಸುತ್ತ ಅಪಘಾತದಲ್ಲಿ ನಾಯಿಯನ್ನು ಸಾಯಿಸುತ್ತಾನೆ. ಕೊನೆಗೆ ತಾನೂ ಅಪಘಾತದಲ್ಲಿಯೇ ಸಾಯುತ್ತಾನೆ. ಸತ್ತ ವಿನಯ್ ಬದುಕಿದ್ದೇನೆಂಬ ಭ್ರಮೆಯಲ್ಲಿಯೇ ಚಿತ್ರ ಪ್ರಾರಂಭವಾಗುತ್ತದೆ. ಈ ನಾಯಿಯನ್ನು ತಾಯಿಯೆಂದು ಭಾವಿಸುವ ರಾಯಪ್ಪ ವಿನಯ್ ಪಾಲಿಗೆ ಯಮನಾಗಿ ಬಂದು ಕಾಡಲು ಶುರು ಮಾಡುತ್ತಾನೆ. ವಿನಯ್‌ಗೆ ಭೂಮಿಯ ಮೇಲೆ ಬದುಕುಳಿಯಲು ರಾಯಪ್ಪ 45 ದಿನಗಳ ಗಡುವು ನೀಡುತ್ತಾನೆ. ಆ ಅವಧಿಯಲ್ಲಿ ನಡೆಯುವ ಒಂದಷ್ಟು ಸನ್ನಿವೇಶಗಳೇ ಸಿನಿಮಾವಾಗಿದೆ.
ಕಥೆ, ಚಿತ್ರಕಥೆಗಿಂತಲೂ ಹೆಚ್ಚು ಗಮನ ಸೆಳೆಯುವುದು ಚಿತ್ರದ ಮೇಕಿಂಗ್. ಪ್ರತಿ ದೃಶ್ಯವೂ ಅದ್ದೂರಿಯಾಗಿದೆ. ಹಲವು ಕಡೆ ಗ್ರಾಫಿಕ್ಸ್‌ನಲ್ಲಿ ಕನ್ನಡ ಸಿನಿಮಾರಂಗಕ್ಕೆ ಹೊಸತು ಎಂಬಂಥ ಲೋಕ ಸೃಷ್ಟಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪಾತ್ರವರ್ಗವೇ ಸಿನಿಮಾದ ದೊಡ್ಡ ಗೆಲುವು. ರಾಯಪ್ಪನಾಗಿ ಉಪೇಂದ್ರ ಅವರ ಗೆಟಪ್, ಹಾವಭಾವ ಮುದ ನೀಡುತ್ತದೆ. ಯಮನ ಸ್ವರೂಪಿ ರಾಯಪ್ಪನಾಗಿ ಉಪೇಂದ್ರ ಅಕ್ಷರಶಃ ಸಿನಿಮಾವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಆ ಪಾತ್ರಕ್ಕೆ ತದ್ವಿರುದ್ಧವಾಗಿ ಎಲ್ಲ ಸನ್ನಿವೇಶಗಳನ್ನು ಶಾಂತವಾಗಿ ನಿಭಾಯಿಸುವ ಶಿವಪ್ಪನಾಗಿ ಶಿವರಾಜ್‌ಕುಮಾರ್ ಮತ್ತೊಂದು ಹೆಗಲು ನೀಡಿದ್ದಾರೆ. ಸಾಮಾನ್ಯ ವ್ಯಕ್ತಿಯಾಗಿ ಅಲ್ಲಲ್ಲಿ ಸಹಜ ಹಾಸ್ಯದಿಂದ ರಾಜ್ ಬಿ ಶೆಟ್ಟಿ ನಗಿಸುತ್ತಾರೆ. ಯಮನ ಬಲಗೈ ಬಂಟನಾಗಿ ಜಾಫರ್ ಸಾದಿಕ್ ಗಮನ ಸೆಳೆಯುತ್ತಾರೆ.
ಮುಖ್ಯ ಕಥೆ ಇರುವುದು ದ್ವಿತೀಯಾರ್ಧದಲ್ಲಿ. ಆದರೆ ಚಿತ್ರದ ಮೊದಲಾರ್ಧ ಸಹಜವಾಗಿ ನೋಡಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಒಂದಷ್ಟು ಅನಗತ್ಯ ಸನ್ನಿವೇಶಗಳಿಗೆ ಕಡಿವಾಣ ಹಾಕಿ ಚಿತ್ರದ ಅವಧಿ ಕಡಿಮೆ ಮಾಡುವ ಅವಕಾಶ ನಿರ್ದೇಶಕರಿಗಿತ್ತು. ಉದಾಹರಣೆಗೆ ರಾಜ್ ಶೆಟ್ಟಿ ಪ್ರೇಮಕಥೆ, ಸುಧಾರಾಣಿ ಶಿವರಾಜ್‌ಕುಮಾರ್ ಕಾಂಬಿನೇಶನ್ ದೃಶ್ಯಗಳು, ಇಂಗ್ಲಿಷ್ ಹಾಡು ಮುಖ್ಯಕಥೆಯ ಓಘಕ್ಕೆ ಅಡ್ಡಿಪಡಿಸುತ್ತವೆ. ಶಿವರಾಜ್‌ಕುಮಾರ್ ಅಭಿಮಾನಿಗಳೆಗೆಂದೇ ಮಾಡಿದಂತಿರುವ, ‘ಕಾಂತಾರ–1’ ಚಿತ್ರದಿಂದ ಹಿಡಿದು ಹಲವು ಇಂಗ್ಲಿಷ್ ಸಿನಿಮಾಗಳ ಇತರೆ ದೃಶ್ಯಗಳನ್ನು ನೆನಪಿಸುವ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ತಾಳ್ಮೆ ಪರೀಕ್ಷಿಸುತ್ತದೆ. ಇಲ್ಲಿನ ಶಿವನ ಅವತಾರಗಳನ್ನು ಗ್ರಾಫಿಕ್ಸ್‌ನಿಂದ ಜಾತ್ರೆಯಾಗಿಸುವ ಬದಲು ಭಕ್ತಿಪೂರ್ಣವಾಗಿ ತೋರಿಸಿದ್ದರೆ, ಸಿನಿಮಾ ಇನ್ನೊಂದು ಮಜಲನ್ನು ತಲುಪುವ ಅವಕಾಶವಿತ್ತು.
ನೋಡಬಹುದಾದ ಸಿನಿಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.