
ನಟ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ 'ಕಾಂತಾರ ಚಾಪ್ಟರ್ 1' ಗಲ್ಲಾ ಪೆಟ್ಟಿಗೆಯಲ್ಲಿ ಅಸಾಮಾನ್ಯ ಸಾಧನೆ ಮುಂದುವರೆಸಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆದಿದೆ.
ಪ್ರಪಂಚದಾದ್ಯಂತ ಅನೇಕ ದಾಖಲೆಗಳನ್ನು ಬರೆದಿರುವ ಕಾಂತಾರ ಕನ್ನಡ ಸಿನಿಮಾದ ಹೆಮ್ಮೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ. ಸತತ ಮೂರನೇ ವಾರವೂ ಚಿತ್ರಮಂದಿರ ತುಂಬಿ ತುಳುಕುತ್ತಿದ್ದು, ಕನ್ನಡದ ಪ್ರೇಕ್ಷಕರಿಂದ ಕಾಂತಾರ ಸಿನಿಮಾಕ್ಕೆ ಅಭೂತಪೂರ್ವ ಯಶಸ್ಸು ದೊರಕಿದೆ.
2025ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ಭಾರತೀಯ ಸಿನಿಮಾ
ಜಾಗತಿಕ ಗಲ್ಲಾ ಪೆಟ್ಟಿಗೆಯಲ್ಲಿ ₹818 ಕೋಟಿಗೂ ಅಧಿಕ ಗಳಿಕೆ ಮಾಡುವ ಮೂಲಕ 'ಕಾಂತಾರ ಚಾಪ್ಟರ್ 1' 2025ರ ಅತ್ಯಧಿಕ ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. ಕಾಂತಾರ ಸಿನಿಮಾವು ಕರ್ನಾಟಕ ರಾಜ್ಯವೊಂದರಲ್ಲೇ ₹250 ಕೋಟಿ ಗಳಿಕೆಯ ಗಡಿ ದಾಟಿದ ಮೊದಲ ಕನ್ನಡ ಚಲನಚಿತ್ರ ಎಂಬ ಐತಿಹಾಸಿಕ ದಾಖಲೆಯನ್ನು ಬರೆದಿದೆ. ಕನ್ನಡ ಸಿನಿಮಾ ಮತ್ತು ಕರ್ನಾಟಕದ ಇತಿಹಾಸದಲ್ಲಿ ರಾಜ್ಯದಲ್ಲಿ ₹200 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿದ ಏಕೈಕ ಚಲನಚಿತ್ರ 'ಕಾಂತಾರ ಚಾಪ್ಟರ್ 1'. ಇದು ಒಂದು ಹೊಸ ಮೈಲಿಗಲ್ಲಾಗಿದೆ.
'ಕಾಂತಾರ' ಚಿತ್ರವು ಕನ್ನಡ ನೆಲದ ಕಥೆ, ಸಂಸ್ಕೃತಿ ಮತ್ತು ನಂಬಿಕೆಯನ್ನು ವಿಶ್ವದಾದ್ಯಂತ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದೆ. ಈ ಅಸಾಮಾನ್ಯ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಹೊಸ ಮಾನದಂಡವನ್ನು ಸ್ಥಾಪಿಸಿದೆ ಮತ್ತು ಪ್ರಾದೇಶಿಕ ಚಲನಚಿತ್ರಗಳ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.