ADVERTISEMENT

Kantara Chapter 1: ಚಿತ್ರಮಂದಿರ ತುಂಬಿದ ‘ಕಾಂತಾರ’; ಟಿಕೆಟ್‌ ಜೋಪಾನ

50 ಲಕ್ಷಕ್ಕೂ ಅಧಿಕ ಟಿಕೆಟ್‌ ಮಾರಾಟ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 14:29 IST
Last Updated 6 ಅಕ್ಟೋಬರ್ 2025, 14:29 IST
ರಿಷಬ್‌ ಶೆಟ್ಟಿ 
ರಿಷಬ್‌ ಶೆಟ್ಟಿ    

ಅ.2ರಂದು ತೆರೆಕಂಡಿದ್ದ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಒಂದು ದಂತಕಥೆ, ಚಾಪ್ಟರ್‌–1’ ಸಿನಿಮಾ ಚಿತ್ರಮಂದಿರಗಳತ್ತ ಪ‍್ರೇಕ್ಷಕರನ್ನು ಸೆಳೆಯುತ್ತಿದೆ. ಕಳೆದ ನಾಲ್ಕೈದು ದಿನಗಳಲ್ಲಿ ಮಾರಾಟವಾದ ಟಿಕೆಟ್‌ ಸಂಖ್ಯೆಯೇ ಇದಕ್ಕೆ ಸಾಕ್ಷಿ. 

‘ಬುಕ್‌ಮೈ ಶೋ’ ಮೂಲಕವೇ 50 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಹೊಂಬಾಳೆ ಫಿಲ್ಮ್ಸ್‌ ತಿಳಿಸಿದೆ. ಸಿನಿಮಾ ಬಿಡುಗಡೆಯಾದ ದಿನವೇ ಸಿನಿಮಾದ 12 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದ್ದವು. ಪ್ರತಿ ದಿನ 10 ಲಕ್ಷ ಟಿಕೆಟ್‌ಗಳು ‘ಬುಕ್‌ಮೈಶೋ’ ಮುಖಾಂತರ ಬಿಕರಿಯಾಗುತ್ತಿವೆ. ಸೋಮವಾರವೂ ಕೆಲ ಮಲ್ಟಿಪ್ಲೆಕ್ಸ್‌ಗಳು 20–23 ತೆರೆಗಳನ್ನು ಈ ಸಿನಿಮಾಗಾಗಿ ನೀಡಿದೆ. ದೇಶದಾದ್ಯಂತ ಏಳು ಸಾವಿರಕ್ಕೂ ಅಧಿಕ ತೆರೆಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ವಿದೇಶಗಳಲ್ಲೂ ಭರ್ಜರಿಯಾದ ಕಲೆಕ್ಷನ್‌ ಮಾಡಿದೆ. ಉತ್ತರ ಅಮೆರಿಕದಲ್ಲಿ ಸಿನಿಮಾ ಇಲ್ಲಿಯವರೆಗೆ ₹17 ಕೋಟಿಗೂ ಅಧಿಕ ಹಣ ಗಳಿಸಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಸಿನಿಮಾ ₹63 ಲಕ್ಷಕ್ಕೂ ಅಧಿಕ ಹಣ ಗಳಿಸಿದೆ. 

ಇದೇ ಸಂದರ್ಭದಲ್ಲಿ ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾ ‘ರಿಕ್ಕಿ’ ಬಿಡುಗಡೆಯಾದ ದಿನಗಳನ್ನು ರಿಷಬ್‌ ಶೆಟ್ಟಿ ನೆನಪಿಸಿಕೊಂಡಿದ್ದಾರೆ. ‘2016ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000ಕ್ಕೂ ಹೆಚ್ಚು ಹೌಸ್‌ಫುಲ್‌ ಶೋಗಳ ಈ ಅದ್ಭುತ ಪಯಣ. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ನಿಮಗೆ ಸದಾ ಋಣಿ’ ಎಂದಿದ್ದಾರೆ. ‘ರಿಕ್ಕಿ’ ಸಿನಿಮಾ 2016ರ ಜ.22ರಂದು ತೆರೆಕಂಡಿತ್ತು. ಆ ಸಂದರ್ಭದಲ್ಲಿ ಟ್ವೀಟ್‌ ಒಂದನ್ನು ಮಾಡಿದ್ದ ರಿಷಬ್‌, ‘ಅಂತು ಇಂತು ಅವರಿವರ ಕೈಕಾಲು ಹಿಡಿದು ಮಂಗಳೂರಿನ ಬಿಗ್‌ ಸಿನಿಮಾಸ್‌ನಲ್ಲಿ ಒಂದು ಶೋ ಸಿಕ್ತು’ ಎಂದು ಉಲ್ಲೇಖಿಸಿದ್ದರು. 

ADVERTISEMENT

ಟಿಕೆಟ್‌ ಜೋಪಾನ 

ಸಿನಿಮಾ ಟಿಕೆಟ್‌ ದರವನ್ನು ಗರಿಷ್ಠ ₹200ಕ್ಕೆ ನಿಗದಿಪಡಿಸಿ ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಹೈಕೋರ್ಟ್‌ನಲ್ಲಿ ಸರ್ಕಾರದ ನಿರ್ಣಯದ ಪರವಾಗಿ ತೀರ್ಪು ಬಂದರೆ ಹೆಚ್ಚುವರಿಯಾಗಿ ಪಾವತಿಸಿದ ಹಣ ವಾಪಸ್‌ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ. ಸಿನಿಮಾ ವೀಕ್ಷಣೆ ಬಳಿಕ ಟಿಕೆಟ್‌ ಎಸೆಯದೆ ಭದ್ರವಾಗಿರಿಸಿಕೊಳ್ಳಿ. ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳ ಮಾಲೀಕರಿಗೆ ಟಿಕೆಟ್‌ ಮಾರಾಟದ ದಾಖಲೆ ನಿರ್ವಹಣೆಗೆ ಸೂಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.