ಬೆಂಗಳೂರು: ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಬಹುನಿರೀಕ್ಷಿತ ಕಾಂತಾರ ಪ್ರಿಕ್ವೆಲ್ ಟ್ರೇಲರ್ ಈಚೆಗೆ ಬಿಡುಗಡೆಯಾಗಿ ಸದ್ದು ಮಾಡಿತ್ತು. ಇದೀಗ ಚಿತ್ರದ ಮೊದಲ ಲಿರಿಕಲ್ ಹಾಡು ಶನಿವಾರ ಮಧ್ಯರಾತ್ರಿ ಹೊಂಬಾಳೆ ಫಿಲಂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದ್ದು, ಅಭಿಮಾನಿಗಳ ಮನಗೆದ್ದಿದೆ.
'ಬ್ರಹ್ಮಕಲಶ' ಶೀರ್ಷಿಕೆಯಡಿ ಬಹುಭಾಷೆಗಳಲ್ಲಿ ಬಿಡುಗಡೆಗೊಂಡಿರುವ ಹಾಡು, ಶಿವಭಕ್ತಿ ಗೀತೆಯ ಸ್ವರೂಪದಲ್ಲಿದೆ. ಭಕ್ತಿಪರವಶಗೊಳಿಸುವ ಹಾಡಿನ ಸಂಯೋಜನೆ ಹಾಗೂ ಗಾಯನಕ್ಕೆ ಕೇಳುಗರು ಮನಸೋತಿದ್ದಾರೆ. ಕಾಂತಾರ ಮೊದಲ ಭಾಗದಲ್ಲಿ ಪ್ರಸಿದ್ಧಿ ಪಡೆದಿದ್ದ 'ವರಾಹ ರೂಪಂ’ ಹಾಡಿನೊಂದಿಗೆ 'ಬ್ರಹ್ಮಕಲಶ' ಹಾಡನ್ನು ಹೋಲಿಸಿ ಸಂಭ್ರಮಿಸುತ್ತಿದ್ದಾರೆ.
ನಾಲ್ಕು ಭಾಷೆ ಒಬ್ಬನೇ ಗಾಯಕ:
'ಬ್ರಹ್ಮಕಲಶ' ಸದ್ಯ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆ ಹಾಡುಗಳನ್ನು ಖ್ಯಾತ ಗಾಯಕ ಅಬ್ಬಿ ವಿ. ಅವರೇ ಹಾಡಿರುವುದು ವಿಶೇಷ. ಮಲಯಾಳ ಹಾಡನ್ನು ಗಾಯಕ ಹರಿಶಂಕರ್ ಕೆ.ಎಸ್. ಹಾಡಿದ್ದಾರೆ.
ಕನ್ನಡ, ತುಳು ಹಾಗೂ ಸಂಸ್ಕೃತ ಮಿಶ್ರಿತವಾಗಿರುವ ಈ ಹಾಡು, ಮಧ್ಯರಾತ್ರಿ ಬಿಡುಗಡೆಯಾದರೂ ಕೇವಲ ನಾಲ್ಕು ತಾಸಿನಲ್ಲಿ 65 ಸಾವಿರದಷ್ಟು ವೀಕ್ಷಣೆ ಕಂಡಿದೆ.
ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮನಮುಟ್ಟುವಂತಿದ್ದು, ಅಭಿಮಾನಿಗಳು ಕೊಂಡಾಡಿದ್ದಾರೆ. 'ವರಾಹ ರೂಪಂ' ಹಾಡು ಬರೆದಿದ್ದ ಶಶಿರಾಜ್ ಕಾವೂರು ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ.
ಕಾಂತಾರ ಪ್ರಿಕ್ವೆಲ್ ಅಕ್ಟೋಬರ್ 2ರಂದು ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ತೆರೆಕಾಣಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.