ADVERTISEMENT

ಪುನೀತ್ ರಾಜ್‌ಕುಮಾರ್ ಜನ್ಮದಿನದಂದು ವಿಶ್ವಸಂಸ್ಥೆಯಲ್ಲಿ ‘ಕಾಂತಾರ’ ಪ್ರದರ್ಶನ

ಕನ್ನಡದಲ್ಲಿ ಮಾತನಾಡಲಿರುವ ರಿಷಬ್ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2023, 7:50 IST
Last Updated 16 ಮಾರ್ಚ್ 2023, 7:50 IST
   

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಸೂಪರ್ ಹಿಟ್‌ ಆಗಿದೆ. ಜತೆಗೆ, ಕರ್ನಾಟಕದ ಸಂಸ್ಕೃತಿ, ಆಚರಣೆಯನ್ನು ದೇಶದ ಜನರಿಗೆ ಪರಿಚಯಿಸುವ ಮೂಲಕ ಗಮನ ಸೆಳೆದಿದೆ.

ಇದೀಗ ಮಾರ್ಚ್‌ 17ರಂದು ನಟ ದಿ. ಪುನೀತ್‌ ರಾಜ್‌ಕುಮಾರ್‌ ಜನ್ಮದಿನದಂದು ವಿಶ್ವಸಂಸ್ಥೆಯಲ್ಲಿ ‘ಕಾಂತಾರ’ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.

ವಿಶ್ವಸಂಸ್ಥೆಯ ವಾರ್ಷಿಕ ಸಭೆ ನಡೆಯುತ್ತಿದ್ದು, ವಿಶ್ವದ ಹಲವು ರಾಷ್ಟ್ರಗಳ ಪ್ರತಿನಿಧಿಗಳು ವಿಶ್ವ ಇದೀಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಈ ಸಭೆಯಲ್ಲಿ ನಟ ರಿಷಬ್ ಶೆಟ್ಟಿ ಸಹ ಭಾಗವಹಿಸಲಿದ್ದು, ಪರಿಸರ ಸಂರಕ್ಷಣೆ, ಹವಾಮಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ.

ADVERTISEMENT

ಕಾಂತಾರ ಸಿನಿಮಾ ಮೂಲಕ ಕಾಡಂಚಿನ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿರುವ ನಿರ್ದೇಶಕ ರಿಷಬ್ ಶೆಟ್ಟಿ ಇದೇ ವಿಷಯವಾಗಿ ವಿಶ್ವಸಂಸ್ಥೆಯಲ್ಲಿ ಮಾತನಾಡಲಿದ್ದಾರೆ. ವಿಶ್ವಸಂಸ್ಥೆಯಲ್ಲಿ ತಮ್ಮತನ ಮೆರೆಯಲಿರುವ ರಿಷಬ್ ಶೆಟ್ಟಿ ಅಲ್ಲಿ ಕನ್ನಡದಲ್ಲಿಯೇ ಮಾತನಾಡುವುದು ವಿಶೇಷ. ರಿಷಬ್ ಶೆಟ್ಟಿ, ವಿಶ್ವಸಂಸ್ಥೆಯಲ್ಲಿ ಮಾತನಾಡಲಿರುವ ಬಗ್ಗೆ ಕರ್ನಾಟಕ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಕಾಂತಾರ ಸಿನಿಮಾ ಮೂಲಕ‌ ಕನ್ನಡಿಗರ, ಭಾರತೀಯರ ಮನಗೆದ್ದ ರಿಷಬ್ ಶೆಟ್ಟಿ ಈಗ ವಿಶ್ವ ಸಂಸ್ಥೆಯಲ್ಲಿ ಮಾತನಾಡಿದ ಕನ್ನಡದ ಮೊದಲ ನಟ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ಹಿಂದಿ ಹೇರಿಕೆ ಬಗ್ಗೆ ಮಹಾ ಸುಳ್ಳು ಆರೋಪ ಮಾಡುತ್ತಿರುವ ಹೊತ್ತಿನಲ್ಲಿ ಅವರು ವಿಶ್ವ ಸಂಸ್ಥೆಯಲ್ಲಿ ಕನ್ನಡ ಮಾತನಾಡುವ ಮೂಲಕ‌ ಎಲ್ಲ ಭಾಷೆಗಳಿಗೂ ಸಮಾನ ಅವಕಾಶವಿದೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

ಮಾರ್ಚ್ 17 ರಂದು ‘ಕಾಂತಾರ’ ಸಿನಿಮಾ ವಿಶ್ವಸಂಸ್ಥೆಯ ಪ್ರತಿನಿಧಿಗಳಿಗಾಗಿ ಪ್ರದರ್ಶನಗೊಳ್ಳಲಿದೆ.

‘ಕಾಂತಾರ’ ಸಿನಿಮಾದ ಭಾಗವಾಗಿ ಹಲವು ತಿಂಗಳು ಕಾಡಂಚಿನಲ್ಲಿ ದಿನ ಕಳೆದಿದ್ದ ರಿಷಬ್‌ ಶೆಟ್ಟಿ, ಇದೀಗ ಕಾಡಂಚಿನ ಜನರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೋರಿ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಯೊಂದನ್ನು ಸಲ್ಲಿಸಿದ್ದರು.

ದೇಶದಾದ್ಯಂತ 2022ರ ಸೆ.30ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ತೆರೆಕಂಡಿದ್ದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದೆ. ಈ ಚಿತ್ರದಲ್ಲಿ ರಿಷಬ್‌ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ಕೆಜಿಎಫ್‌ –1, ಕೆಜಿಎಫ್‌–2 ನಿರ್ಮಿಸಿರುವ ಹೊಂಬಾಳೆ ಫಿಲಂಸ್‌ ಕಾಂತಾರ ಚಿತ್ರವನ್ನು ನಿರ್ಮಿಸಿದೆ. ಕೆಜಿಎಫ್‌ ವ್ಯಾಪಕ ಯಶಸ್ಸಿನ ನಂತರ ಹೊಂಬಾಳೆ , ಕೆಜಿಎಫ್‌–2 ನಿರ್ಮಿಸಿ ಸಾವಿರ ಕೋಟಿಗಿಂತ ಹೆಚ್ಚು ಹಣ ಬಾಚಿತ್ತು. ಇದೀಗ ₹450 ಕೋಟಿಗೂ ಹೆಚ್ಚು ಗಳಿಕೆ ಕಂಡಿರುವ ‘ಕಾಂತಾರ’ ಚಿತ್ರದ 2ನೇ ಭಾಗಕ್ಕೆ ನಿರ್ಮಾಣ ಸಂಸ್ಥೆ ರಿಷಬ್‌ ಶೆಟ್ಟಿ ಅವರಿಗೆ ಪ್ರಸ್ತಾಪ ಇಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.