ಇತ್ತೀಚಿನ ವಿದ್ಯಮಾನಗಳಲ್ಲಿ ಖ್ಯಾತ ನಟ, ನಟಿಯರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವೊಂದು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಆ ಸುದ್ದಿಗಳನ್ನು ನೋಡಿದ ಅಭಿಮಾನಿಗಳು, ನೆಟ್ಟಿಗರು ಅದುವೇ ನಿಜ ಅಂತ ನಂಬಿ ಬಿಡುತ್ತಾರೆ. ಆದರೆ, ಈ ಬಗ್ಗೆ ಖುದ್ದು ನಟ, ನಟಿಯರೇ ಅಧಿಕೃತವಾಗಿ ಹೇಳಿಕೊಂಡಾಗ ಮಾತ್ರ ಅಸಲಿ ಸತ್ಯದ ಬಗ್ಗೆ ತಿಳಿಯುತ್ತದೆ.
ಹೀಗೆ ಸೈಮಾ ಎಕ್ಸ್ ಖಾತೆಯಲ್ಲಿ ಕಿಚ್ಚ ಸುದೀಪ್ ಹಾಗೂ ನಟ ಉಪೇಂದ್ರ ಬಗ್ಗೆ ಸುದ್ದಿ ಒಂದನ್ನು ಹಂಚಿಕೊಂಡಿತ್ತು. ಆ ಪೋಸ್ಟ್‌ನಲ್ಲಿ ಸಿಂಬು ಅವರ ಬಹುನಿರೀಕ್ಷಿತ ಅರಸನ್ ಸಿನಿಮಾದಲ್ಲಿ ವಿಲನ್ ಪಾತ್ರಗಳಲ್ಲಿ ಕಿಚ್ಚ ಸುದೀಪ್ ಹಾಗೂ ನಟ ಉಪೇಂದ್ರ ನಟಿಸಲಿದ್ದಾರೆ ಎಂಬುವುದನ್ನು ವರದಿ ಮಾಡಲಾಗಿತ್ತು. ಸೈಮಾ ಟ್ವೀಟ್ (ಎಕ್ಸ್) ಅನ್ನು ಗಮನಿಸಿದ ಕಿಚ್ಚ ಸುದೀಪ್ ರೀಟ್ವೀಟ್ ಮಾಡುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ರೀಟ್ವೀಟ್‌ನಲ್ಲಿ ಏನಿದೆ?
‘ಸರಿ ಸೈಮಾ.. ನಿಮ್ಮ ಪ್ರಶಸ್ತಿ ಸಂಜೆಗಳಲ್ಲಿ ನೀವು ಏನು ಮಾಡುತ್ತೀರಿ ಎಂಬುದರ ಬಗ್ಗೆ ಅಪಾರ ಗೌರವವಿದೆ. ಈ ಎಲ್ಲ ಸುದ್ದಿಗಳಿಗೆ ಸಂಬಂಧಿಸಿದಂತೆ ನನ್ನ ಕಡೆಯಿಂದ ಒಂದು ಸಲಹೆ ಇದೆ. ಗುಟ್ಟಾಗಿ ಹೇಳುತ್ತೇನೆ ನಿಮ್ಮ ಸುದ್ದಿ ಮೂಲಗಳನ್ನು ಬದಲಾಯಿಸಿ. ಮುಂದಿನ ಸೈಮಾ ಅವಾರ್ಡ್ನಲ್ಲಿ ‘ಅತ್ಯುತ್ತಮ ನಕಲಿ ಸುದ್ದಿ ಪ್ರಶಸ್ತಿ’ ಇದೆಯಾ ಎಂದು ತಿಳಿಯಬೇಕಿದೆ’ ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಚಿತ್ರ: ಸೈಮಾ ಎಕ್ಸ್
ಇನ್ನು, ಕಿಚ್ಚ ಸುದೀಪ್ ಹಾಗೂ ನಟ ಉಪೇಂದ್ರ ಅವರ ಫೋಟೋ ಹಾಕಿ ಪೋಸ್ಟ್ ಹಂಚಿಕೊಂಡಿದ್ದ ಸೈಮಾ ಟ್ವೀಟ್ ಡಿಲೀಟ್ ಮಾಡಿದೆ. ಅಲ್ಲದೇ ಸುದೀಪ್ ಟ್ವೀಟ್‌ಗೆ ಪ್ರತಿಕ್ರಿಯೆ ಕೊಟ್ಟಿದೆ. ‘ಚೀಫ್, ಅರ್ಥವಾಯಿತು. ನಾವು ಖಂಡಿತವಾಗಿಯೂ ನಮ್ಮ ಮೂಲಗಳನ್ನು ಅಪ್‌ಗ್ರೇಡ್ ಮಾಡುತ್ತೇವೆ. ಮತ್ತು ನಮ್ಮ ಪ್ರಶಸ್ತಿ ರಾತ್ರಿಗಳ ಬಗ್ಗೆ ಅನುಕಂಪದ ಮಾತುಗಳನ್ನು ಆಡಿದ್ದಕ್ಕೆ ಧನ್ಯವಾದಗಳು. ಈ ಸಲಹೆ ನಿಮ್ಮಿಂದ ಬರುತ್ತಿರುವುದು ತುಂಬಾ ಅರ್ಥಪೂರ್ಣವಾಗಿದೆ’ ಎಂದು ಸೈಮಾ ರೀಟ್ವೀಟ್ ಮಾಡಿದೆ.
ಇದಕ್ಕೆ ಸುದೀಪ್ ಕೂಡ ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಸೈಮಾ, ಎಲ್ಲವೂ ಒಳ್ಳೆಯ ಭಾವನೆಗಳು ಎಂದು ರೀಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.