
ಕಿಚ್ಚ ಸುದೀಪ್
ಚಿತ್ರ: ಇನ್‌ಸ್ಟಾಗ್ರಾಂ
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ಮಾರ್ಕ್’ ಸಿನಿಮಾ ಇದೇ ಡಿಸೆಂಬರ್ 25ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ದೊಡ್ಡ ಪರದೆ ಮೇಲೆ ನೆಚ್ಚಿನ ನಟ ಕಿಚ್ಚ ಸುದೀಪ್‌ರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈ ನಡುವೆ ಮಾರ್ಕ್ ಸಿನಿಮಾ ಪ್ರಚಾರಕ್ಕಾಗಿ ಶನಿವಾರ ಹುಬ್ಬಳ್ಳಿ ನಗರದ ನೆಹರೂ ಮೈದಾನದಲ್ಲಿ ‘ಪ್ರೀ ರಿಲೀಸ್ ಇವೆಂಟ್’ (ಮಾರ್ಕ್ ಉತ್ಸವ) ನಡೆಯಿತು. ಚಳಿಯನ್ನೂ ಲೆಕ್ಕಿಸದೆ ಅಭಿಮಾನಿಗಳು ಮಾರ್ಕ್ ಉತ್ಸವದಲ್ಲಿ ಭಾಗಿಯಾಗಿದ್ದು, ಜೊತೆಗೆ ಕನ್ನಡದ ಕಲಾವಿದರು ಮನರಂಜನೆ ಕಾರ್ಯಕ್ರಮ ನೀಡಿದರು.
ವಿಶೇಷ ಏನೆಂದರೆ ‘ಮಾರ್ಕ್’ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ವೇಳೆ ಸುದೀಪ್ ಅವರು ವಿಡಿಯೊ ಮಾಡಿ ಹುಬ್ಬಳ್ಳಿಯ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಧನ್ಯವಾದಗಳು ಹುಬ್ಬಳ್ಳಿ. ನನ್ನ ಎಲ್ಲಾ ಗೆಳೆಯರಿಗೆ, ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಎಲ್ಲಾ ಯುವಕ, ಯುವತಿಯರು ಮತ್ತು ಮಕ್ಕಳಿಗೆ ಧನ್ಯವಾದಗಳು. ಎಂತಹ ಅದ್ಭುತ ಸಂಜೆಯಾಗಿತ್ತು. ಯಾವಾಗಲೂ ಕೃತಜ್ಞರಾಗಿರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಇನ್ನು, ಸುದೀಪ್ ಅವರು ಮಾರ್ಕ್ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದು ಮಾತ್ರವಲ್ಲ, ಸಹ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಿಂದಿನ ‘ಮ್ಯಾಕ್ಸ್’ ಸಿನಿಮಾದ ತಂತ್ರಜ್ಞರ ತಂಡವೇ ಈ ‘ಮಾರ್ಕ್’ ಸಿನಿಮಾದಲ್ಲೂ ಜೊತೆಯಾಗಿದೆ. ರೋಶಿನಿ ಪ್ರಕಾಶ್, ಯೋಗಿ ಬಾಬು, ನವೀನ್ ಚಂದ್ರ, ದೀಪಿಕಾ, ಗುರು ಸೋಮಸುಂದರಂ ಹಾಗೂ ಇತರರು ನಟಿಸಿದ್ದಾರೆ. ಅಜನೀಶ್ ಲೋಕನಾಥ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.