ADVERTISEMENT

ಸಲ್ಲು ಬಾಯ್‌ ಜೊತೆ ರೊಮ್ಯಾನ್ಸ್‌ ಮಾಡಲಿರುವ ಕನ್ನಡತಿ ಪೂಜಾ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 11:58 IST
Last Updated 4 ಡಿಸೆಂಬರ್ 2019, 11:58 IST
   

ಬೆಂಗಳೂರು: ಕಿಕ್‌ 2 ಸಿನಿಮಾದ ಮೂಲಕ ಸಲ್ಮಾನ್‌ ಖಾನ್‌ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಭಾರತ್‌ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿರುವುದರಿಂದ ಕಿಕ್‌ 2 ಸಿನಿಮಾವನ್ನು ಯಶಸ್ವಿಗೊಳಿಸಲು ಸಲ್ಲು ಬಾಯ್‌ ಪಣತೊಟ್ಟಿದ್ದಾರೆ.

ಈ ಸಿನಿಮಾದಲ್ಲಿ ಸಲ್ಲುಗೆ ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ ಎಂದು ಬಾಲಿವುಡ್‌ ಅಂಗಳದಲ್ಲಿ ಕೇಳಿಬರುತ್ತಿರುವ ಮಾತುಗಳು. ಆದಾಗ್ಯೂ ಚಿತ್ರತಂಡ ನಾಯಕಿಯ ಹೆಸರನ್ನು ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಜಾಕ್ವೇಲಿನ್‌, ಕಿರ್ತಿ ಸನೂನ್‌ ಹಾಗೂ ಪೂಜಾ ಹೆಗ್ಡೆ ಅವರ ಹೆಸರುಗಳು ಕೇಳಿಬಂದಿದ್ದವು.

ADVERTISEMENT

ಇದೀಗ ಪೂಜಾ ಹೆಗ್ಡೆ ಅವರ ಹೆಸರು ಅಂತಿಮವಾಗಿದೆ ಎನ್ನಲಾಗುತ್ತಿದೆ. ಈ ವೇಳೆ ಖಾಸಗಿ ಟಿ.ವಿಗೆ ಸಂದರ್ಶನ ನೀಡಿರುವ ಪೂಜಾ ಹೆಗ್ಡೆ ನಾನು ಸಲ್ಮಾನ್‌ ಖಾನ್‌ ಜೊತೆ ನಟಿಸಲು ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ. ಈ ಮಾತು ಕಿಕ್‌ 2 ಸಿನಿಮಾಗೆ ಆಯ್ಕೆಯಾಗಿರುವುದನ್ನು ಖಾತ್ರಿಪಡಿಸಿದೆ ಎಂದು ಪೂಜಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.

‘ಕಿಕ್‌’ ಸಿನಿಮಾದ ಚಿತ್ರಕತೆ ಸಿದ್ಧವಾಗಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ’ ಎಂದು ನಿರ್ದೇಶಕ ಸಾಜಿದ್‌ ನಾಡಿಯಾವಾಲಾ ತಿಳಿಸಿದ್ದಾರೆ.

2014ರಲ್ಲಿ ಬಿಡುಗಡೆಯಾಗಿದ್ದ ಕಿಕ್‌ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವ ಮೂಲಕಬಾಕ್ಸ್‌ ಆಫೀಸಿನಲ್ಲಿ ಉತ್ತಮ ಗಳಿಕೆ ಮಾಡಿತ್ತು. 2021ರ ಈದ್‌ಗೆ ಕಿಕ್‌ 2 ಸಿನಿಮಾ ಬಿಡುಗಡೆಯಾಗಲಿದೆ ಎಂದು ಸಲ್ಮಾನ್‌ ಖಾನ್‌ ಟ್ವೀಟ್‌ ಮಾಡಿದ್ದಾರೆ.

ಪ್ರಭುದೇವ ನಿರ್ದೇಶನದ ಸಲ್ಮಾನ್‌ ಖಾನ್‌ ನಟನೆಯ 'ದಬಾಂಗ್‌ 3' ಚಿತ್ರ ಕನ್ನಡಕ್ಕೂ ಡಬ್‌ ಆಗಿದೆ. ಇದರಲ್ಲಿ ನಟ ಸುದೀಪ್‌ ಕೂಡ ನಟಿಸಿದ್ದಾರೆ. ಡಿಸೆಂಬರ್‌ 20ರಂದು ಹಿಂದಿ, ಕನ್ನಡ, ತೆಲುಗು ಮತ್ತು ಮಲಯಾಳದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.