ADVERTISEMENT

ಕಾಂತಾರವನ್ನು ಶ್ಲಾಘಿಸಿದ ಬಾಲಿವುಡ್‌ ನಿರ್ದೇಶಕ ಮಧುರ್‌ ಭಂಡಾರ್ಕರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2022, 6:41 IST
Last Updated 20 ಅಕ್ಟೋಬರ್ 2022, 6:41 IST
   

ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಪಡೆದಿರುವ ಕಾಂತಾರಕ್ಕೆ ದಿನದಿಂದ ದಿನಕ್ಕೆ ಸಿನಿಮಾ ತಂತ್ರಜ್ಞರ ಮೆಚ್ಚುಗೆಯೂ ಹೆಚ್ಚುತ್ತಿದೆ. ಪ್ರಭಾಸ್‌, ರಾಮ್‌ಗೋಪಾಲ್‌ ವರ್ಮಾ, ಧನುಷ್‌, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ ಸೇರಿದಂತೆ ಚಿತ್ರರಂಗದ ಅನೇಕ ಜನಪ್ರಿಯ ನಟ, ನಟಿ, ನಿರ್ದೇಶಕರು ಕಾಂತಾರವನ್ನು ಹೊಗಳಿದ್ದರು. ಇದೀಗ ಬಾಲಿವುಡ್‌ನ ಜನಪ್ರಿಯ ನಿರ್ದೇಶಕ, ಚಾಂದಿನಿಬಾರ್‌ ಖ್ಯಾತಿಯ ಮಧುರ್‌ ಭಂಡಾರ್ಕರ್‌ ಕಾಂತಾರ ಚಿತ್ರವನ್ನು ಶ್ಲಾಘಿಸಿದ್ದಾರೆ. ‌

ಚಿತ್ರದ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಮಧುರ್‌, ಕಾಂತಾರ ಯಾರೂ ಮಿಸ್‌ ಮಾಡಬಾರದಾದ ಒಂದು ಅದ್ಭುತವಾದ ಸಿನಿಮಾ ಅನುಭವ. ಸೂಕ್ತವಾದ ಹಿನ್ನೆಲೆ ಸಂಗೀತ, ಅತ್ಯದ್ಭುತ ಚಿತ್ರೀಕರಣ ರಿಷಬ್‌ ಅವರ ಆಕರ್ಷಕ ನಿರ್ದೇಶನ ಮತ್ತು ನಟನೆ, ಕ್ಲೈಮ್ಯಾಕ್ಸ್‌ ಒದ್ದೆಯಾದ ಕಣ್ಣುಗಳೊಂದಿಗೆ ನನಗೆ ಮೈನವಿರೇಳಿಸಿತು. ನನಗೆ ಮಾತುಗಳೇ ಬರುತ್ತಿಲ್ಲ. ಇಡೀ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.

ದೇಶದೆಲ್ಲೆಡೆ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ ಕಾಂತಾರ ₹100 ಕೋಟಿ ಕ್ಲಬ್‌ ಸೇರಿದೆ. ತೆಲುಗು ಹಾಗೂ ಹಿಂದಿ ವಲಯದಲ್ಲಿ ಅತ್ಯುತ್ತಮ ಗಳಿಕೆ ಕಾಣುತ್ತಿದೆ. ಕನ್ನಡದಲ್ಲಿ 4ನೇ ವಾರವೂ ಚಿತ್ರ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ.

ADVERTISEMENT

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.