ADVERTISEMENT

ಬಡಮಕ್ಕಳಿಗೆ ಟಿ.ವಿ ಸೆಟ್‌ ನೆರವು ನೀಡಿದ ಮಲಯಾಳ ನಟಿ ಮಂಜು ವಾರಿಯರ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 19:30 IST
Last Updated 8 ಜೂನ್ 2020, 19:30 IST
ಮಲಯಾಳ ನಟಿ ಮಂಜು ವಾರಿಯರ್
ಮಲಯಾಳ ನಟಿ ಮಂಜು ವಾರಿಯರ್   

ಕೊರೊನಾ ಸೋಂಕಿನ ಭೀತಿಯಿಂದಾಗಿ ದೇಶದಾದ್ಯಂತ ಶಾಲೆಗಳು ಪುನರಾರಂಭವಾಗುವುದು ತಡವಾಗಲಿದೆ. ಹೀಗಾಗಿ, ಅನೇಕ ಶಾಲೆಗಳಲ್ಲಿ ವರ್ಚುವಲ್ ತರಗತಿ ಅರ್ಥಾತ್ ಆನ್‌ಲೈನ್ ತರಗತಿಗಳು ಶುರುವಾಗಿವೆ.

ಶಾಲಾ ಆಡಳಿತ ಮಂಡಳಿಗಳು ಆನ್‌ಲೈನ್ ಪಾಠ ಶುರು ಮಾಡಿವೆ. ಆದರೆ, ಎಲ್ಲಾ ಮಕ್ಕಳ ಬಳಿಯೂ ಈ ಪಾಠ ಕೇಳುವುದಕ್ಕೆ ಬೇಕಾದ ಮೊಬೈಲ್‌ ಫೋನ್‌, ಟಿ.ವಿ, ಲ್ಯಾಪ್‌ಟಾಪ್ ಇರಬೇಕಲ್ಲ? ಕೆಲವು ದಿನಗಳ ಹಿಂದೆ ಕೇರಳದ ಊರೊಂದರಲ್ಲಿ ಮನೆಯಲ್ಲಿ ಟಿ.ವಿ ಇಲ್ಲದೇ ಆನ್‌ಲೈನ್‌ ಕ್ಲಾಸ್‌ ಮಿಸ್‌ ಮಾಡಿಕೊಂಡ ವಿದ್ಯಾರ್ಥಿನಿಯೊಬ್ಬಳುಮನನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಇದನ್ನು ಮನಗಂಡ ಮಲಯಾಳ ನಟಿ ಮಂಜು ವಾರಿಯರ್ ಮತ್ತು ಅವರ ತಂಡ‌ ವರ್ಚುವಲ್‌ ತರಗತಿ ಕೇಳಲು ಸೌಲಭ್ಯಗಳಿಲ್ಲದ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ. ಆನ್‌ಲೈನ್ ಶಾಲೆ ಕೇಳಲು ಸಾಧ್ಯವಾಗದ ಮಕ್ಕಳಿಗಾಗಿ ಟಿ.ವಿ. ಸೆಟ್‌ಗಳ ನೆರವು ನೀಡುತ್ತಿದೆ.

ADVERTISEMENT

ಕೇರಳ ಸರ್ಕಾರ ಜೂನ್ ಮೊದಲ ವಾರದಿಂದಲೇ ವರ್ಚುವಲ್‌‌ ಕ್ಲಾಸ್‌ಗಳನ್ನು ಆರಂಭಿಸಿದೆ. ಅಲ್ಲಿನ ಸ್ಟೇಟ್‌ ಜನರಲ್‌ ಎಜುಕೇಷನ್‌ ಡಿಪಾರ್ಟ್‌ಮೆಂಟ್‌ನ ವಿಕ್ಟರ್ಸ್‌ ಚಾನೆಲ್‌ ಮೂಲಕ ತರಗತಿಗಳು ನಡೆಯುತ್ತಿವೆ. ಬೆಳಿಗ್ಗೆ 8.30ರಿಂದ ಸಂಜೆ 5.30ರವರೆಗೆ ಒಂದರಿಂದ 12ರವರೆಗಿನ ಪಾಠಗಳು ಪ್ರಸಾರವಾಗುತ್ತವೆ. ಮನೆಯಲ್ಲಿ ಟಿ.ವಿ ಇಲ್ಲದ ಮಕ್ಕಳಿಗೆ ಸ್ಮಾರ್ಟ್‌ಫೋನ್‌ನಲ್ಲಿ ಆನ್‌ಲೈನ್‌ ತರಗತಿ‌ ತೆಗದುಕೊಳ್ಳಲಾಗುತ್ತದೆ.

ಗ್ರಾಮೀಣ ಭಾಗದಲ್ಲಿ, ಅದರಲ್ಲೂ ಬುಡಕಟ್ಟು ಪ್ರದೇಶಗಳಲ್ಲಿನ ಮಕ್ಕಳು ಟಿ.ವಿ ಹಾಗೂ ಸ್ಮಾರ್ಟ್‌ಫೋನ್‌ ಇಲ್ಲದಿರುವುದರಿಂದ ಈ ತರಗತಿಗಳಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ಇಂತಹ ಬಡ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದಕೇರಳದಲ್ಲಿ ಈಗಾಗಲೇ ರಾಜಕೀಯ ಪಕ್ಷವೊಂದು ‘ಟಿ.ವಿ ಚಾಲೆಂಜ್‌’ ಅಭಿಯಾನ ಆರಂಭಿಸಿದೆ. ಬಡ ಕುಟುಂಬಗಳಿಗೆ ಟಿ.ವಿಗಳನ್ನು ಒದಗಿಸುವಂತೆ ಮಾಡುವುದು ಇದರ ಉದ್ದೇಶ. ಈ ಅಭಿಯಾನಕ್ಕೆ ನಟಿ ಮಂಜು ವಾರಿಯರ್‌, ನಿರ್ದೇಶಕರಾದ ಆಶಿಕ್‌ ಅಬು ಹಾಗೂ ಬಿ. ಉನ್ನಿಕೃಷ್ಣನ್‌ ಕೈ ಜೋಡಿಸಿದ್ದು, ಬಡಮಕ್ಕಳಿಗೆ ಟಿ.ವಿ ಸೆಟ್‌ಗಳನ್ನು ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.