ADVERTISEMENT

PV Web Exclusive| ಹಲವು ಬಣ್ಣ, ಹಲವು ಬಣ: ಇದು ಸ್ಯಾಂಡಲ್‌ವುಡ್‌ ಕಣಾ

ಕೆ.ಎಂ.ಸಂತೋಷಕುಮಾರ್
Published 19 ಸೆಪ್ಟೆಂಬರ್ 2020, 14:22 IST
Last Updated 19 ಸೆಪ್ಟೆಂಬರ್ 2020, 14:22 IST
ಡ್ರಗ್ಸ್‌ ಪ್ರಕರಣದಲ್ಲಿ ಬಂಧಿಯಾಗಿರುವ ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ
ಡ್ರಗ್ಸ್‌ ಪ್ರಕರಣದಲ್ಲಿ ಬಂಧಿಯಾಗಿರುವ ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ    

ಅತ್ತಿಯ ಹಣ್ಣು ನೋಡಲು ಥಳುಕು, ಬಿಚ್ಚಿ ನೋಡಿದರೆ ಒಳಗೆಲ್ಲಾ ಬರೀ ಹುಳುಕು– ಎಂಬ ಮಾತು ನಮ್ಮ ಸ್ಯಾಂಡಲ್‌ವುಡ್‌ನ ಈಗಿನ ಪರಿಸ್ಥಿತಿಗೆ ತುಂಬಾ ಚೆನ್ನಾಗಿಯೇ ಹೋಲಿಕೆಯಾಗುತ್ತದೆ. ‘ಕೆಜಿಎಫ್ ಚಾಪ್ಟರ್‌ –1’‌, ‘ಅವನೇ ಶ್ರೀಮನ್ನಾರಾಯಣ’ನಂತಹ ಪ್ಯಾನ್‌ ಇಂಡಿಯಾ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ ಕಡೆಗೆ ಬೆರಗುಗಣ್ಣಿನಿಂದ ತಿರುಗಿ ನೋಡುವಂತೆ ಆಗಿತ್ತು. ವರ್ಷ ಕಳೆಯುವುದರೊಳಗೆ ಸ್ಯಾಂಡಲ್‌ವುಡ್‌ನಲ್ಲಿನ ಕೆಲವರ ಬೇಡದ ಖಯಾಲಿಗಳಿಂದಾಗಿ ಮತ್ತು ಕೆಟ್ಟ ಕಾರಣಗಳಿಗಾಗಿ ಮತ್ತೆ ಮತ್ತೆನೋಡುವಂತಾಗಿದೆ, ಅದೂ ಇವತ್ತು ಚಂದನವನದ ಯಾರ ಹೆಸರು ಡ್ರಗ್ಸ್‌ ದಂಧೆಯಲ್ಲಿ ಕೇಳಿಬರಬಹುದೆಂದು!

ಆರಂಭದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸಿಕ್ಕಿ ಬಿದ್ದು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಇನ್ನುತಾರಾ ದಂಪತಿ ದಿಗಂತ್‌, ಐಂದ್ರಿತಾ ರೇ, ನಟರಾದ ಸಂತೋಷ್ ಕುಮಾರ್‌, ಅಕುಲ್‌ ಬಾಲಾಜಿ ಈಗ ವಿಚಾರಣೆ ಎದುರಿಸುತ್ತಿದ್ದಾರೆ. ಸಿಸಿಬಿ ಮತ್ತು ಎನ್‌ಸಿಬಿ ತನಿಖೆಯ ಜಾಡು ಗಮನಿಸಿದರೆ ಇದು ಇಷ್ಟಕ್ಕೆ ನಿಲ್ಲುವುದಿಲ್ಲ, ಇನ್ನಷ್ಟು ಸಿನಿಮಾ ತಾರೆಗಳು ನೋಟಿಸ್‌ ಪಡೆಯುವವರ ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಬಾಲಿವುಡ್‌ ಅಂಗಳದಲ್ಲಿ ಅಂಕುರಿಸಿದ ಈ ‘ಡ್ರಗ್ಸ್’ ದಂಧೆಯ ‌ಬೀಜ ಮೊಳಕೆಯೊಡೆದು, ಗಿಡವಾಗಿ, ಮರವಾಗಿ ಅದರ ಬೇರುಗಳು ಈಗ ಎಲ್ಲೆಡೆ ಹರಡಿಕೊಂಡಿವೆ. ಹೀಗೆ ಹರಡಿದ ಬೇರು ಸ್ಯಾಂಡಲ್‌ವುಡ್‌ ಅನ್ನು ಆವರಿಸಿಕೊಂಡಿದೆ ಅಷ್ಟೇ. ಬಾಲಿವುಡ್‌ ಅಂಗಳದ ಕಳೆ ಚಂದನವನದ ಅಂದ ಕೆಡಿಸುತ್ತಿರುವುದನ್ನು ಕಂಡು ಕನ್ನಡ ಸಿನಿರಸಿಕರು ಅಕ್ಷರಶಃ ಕನಲಿ ಹೋಗುತ್ತಿರುವುದೂ ನಿಜ.

ADVERTISEMENT

ಚಿತ್ರರಂಗಕ್ಕೆ ಕೊಳೆ ಮೆತ್ತುತ್ತಿರುವ ಡ್ರಗ್ಸ್‌ ದಂಧೆ ಒಂದುಕಡೆಯಾದರೆ, ಇಂಥದ್ದೇ ಮತ್ತೊಂದು ಪಾರ್ಥೇನಿಯಂನಂತಹ ಕಳೆ ಎಂದರೆ ‘ನೆಪೋಟಿಸಂ’. ಅಂದರೆ ಸ್ವಜನ ಪಕ್ಷಪಾತ! ಇದು ಬಾಲಿವುಡ್‌ನಲ್ಲಿ ವ್ಯಾಪಕವಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಹಲವು ನಟ–ನಟಿಯರೂ ನೆಪೋಟಿಸಂ ವಿರುದ್ಧ ಧ್ವನಿ ಎತ್ತಿದ್ದರು. ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಯ ನಂತರ ಡ್ರಗ್ಸ್‌ ಮತ್ತು ನೆಪೋಟಿಸಂ ಬಗೆಗಿನ ಚರ್ಚೆ ಮುನ್ನೆಲೆಗೆ ಬಂದಿದೆ. ಈ ನೆಪೋಟಿಸಂ ಚಂದನವನವನ್ನೂ ಬಿಟ್ಟಿಲ್ಲ. ಡ್ರಗ್ಸ್‌ ದಂಧೆಸ್ಯಾಂಡಲ್‌ವುಡ್‌ನಲ್ಲಿ ಇಲ್ಲವೇ ಇಲ್ಲ ಎನ್ನುತ್ತಿದ್ದವರು, ಈಗ ನಟ–ನಟಿಯರ ಮುಖವಾಡಗಳು ಕಳಚಿ ಬೀಳಲು ಶುರುವಾಗುತ್ತಿದ್ದಂತೆ ಮೌನದ ಮೊರೆ ಹೋಗಿದ್ದಾರೆ.

ಹೆಸರು ಬಹಿರಂಗಪಡಿಸದಿರುವ ಷರತ್ತಿನೊಂದಿಗೆ ‘PV Web Exclusive’ ಜತೆಗೆ ಲೋಕಾಭಿರಾಮವಾಗಿ ಮಾತಿಗೆ ಕುಳಿತ ನಿರ್ಮಾಪಕ ಕಮ್‌ ನಟರೊಬ್ಬರು, ನಾಟಿ ಕೋಳಿ ಸಾರು ಮತ್ತು ಮುದ್ದೆಯನ್ನು ಮೆಲ್ಲುತ್ತಾ, ನೆಪೋಟಿಸಂ ಪೋಷಿಸುತ್ತಿರುವಸ್ಟಾರ್‌ ನಟರ ಜಾತಕ ಬಿಚ್ಚಿಡುತ್ತಾ ಹೋದರು. ‘ಸ್ಯಾಂಡಲ್‌ವುಡ್‌ನಲ್ಲಿ ನೆಪೋಟಿಸಂ ಇಲ್ಲವೇ? ಖಂಡಿತಾ ಇದೆ. ಡ್ರಗ್ಸ್‌ ಮಾಫಿಯಾದಂತೆಯೇಈ ನೆಪೋಟಿಸಂನ ಕರಾಳ ಮುಖವೂ ಚಂದನವನದ ಅಂದಗೆಡಿಸುತ್ತಿದೆ. ಸಿನಿಮಾಗಳಿಗೆ ಕಲಾವಿದರನ್ನು ಆಯ್ಕೆ ಮಾಡುವಾಗತುಂಬಾ ಮಡಿವಂತಿಕೆ ಅನುಸರಿಸುತ್ತಿದ್ದ ಕಾಲವೊಂದಿತ್ತು. ಅದನ್ನು ಮೀರಿ ಚಿತ್ರರಂಗ ಬೆಳೆಯುತ್ತಾ ಸಾಗುತ್ತಿತ್ತು. ಕಾಲ ಕಳೆಯುವುದೊರಳಗೆ ‘ಸ್ಟಾರ್‌ ವಾರ್’ ಶುರುವಾಯಿತು. ಪರಿಣಾಮ ಈ ಬಣ್ಣದ ಲೋಕದಲ್ಲಿ ಹಲವುಬಣಗಳು ಹುಟ್ಟಿಕೊಂಡವು. ಈಗಿಗ ಅವು ತುಂಬಾ ಚಿಗಿತುಕೊಂಡುಬಿಟ್ಟಿವೆ. ಅದಕ್ಕೆ ರಾಜಕಾರಣದಂತೆಯೇ ಜಾತಿಯ ಸೋಂಕು ಕೂಡ ತಗುಲಿದೆ. ಒಬ್ಬ ಸ್ಟಾರ್ ನಟನಿಗೆ ಸ್ಕ್ರಿಪ್ಟ್‌ ಹೇಳಿ, ಪೇಮೆಂಟ್‌ ಮಾತಾಡಿಚಿತ್ರಕ್ಕೆ ಒಪ್ಪಂದ ಮಾಡಿಕೊಂಡರೆ ಮುಗಿಯೀತು. ನಾಯಕಿಯಿಂದಿಡಿದು, ಸಹ ಕಲಾವಿದರು ಮತ್ತು ತಂತ್ರಜ್ಞರವರೆಗಿನ ಚಿತ್ರತಂಡದ ಆಯ್ಕೆ ಆ ಸ್ಟಾರ್‌ ನಟನ ಇಶಾರೆಗೆ ತಕ್ಕಂತೆ ನಡೆಯುತ್ತದೆ. ನಿರ್ದೇಶಕ ಮತ್ತು ನಿರ್ಮಾಪಕನೂ ಮೂಕಪ್ರೇಕ್ಷಕ, ಸ್ಟಾರ್‌ ನಟರ ಅಣತಿಯಂತೆಯೇ ಎಲ್ಲವೂ ನಡೆಯಬೇಕು. ಇಲ್ಲದಿದ್ದರೆ ಕಾಲ್‌ ಶೀಟ್‌ ಸಿಗುವುದೇ ಇಲ್ಲ, ಸಿಕ್ಕರೂ ಅವರಿಂದ ಅಸಹಕಾರ ಚಳವಳಿ ಎದುರಿಸಲು ಸಿದ್ಧವಾಗಬೇಕು’ ಎನ್ನುವಾಗ ಅವರ ಧ್ವನಿಯಲ್ಲಿ ಬೇಸರ ಮನೆ ಮಾಡಿತ್ತು.

‘ಸ್ಟಾರ್‌ವಾರ್‌ ಪರಿಣಾಮ, ಬಹಳಷ್ಟು ಪೋಷಕ ನಟ–ನಟಿಯರು, ಸಹ ಕಲಾವಿದರು, ಕಿರಿಯ ಕಲಾವಿದರು ಸ್ಟಾರ್‌ ನಟ– ನಟಿಯರ ಬಾಲಬುಡಕರಂತಾಗಬೇಕಾಗಿದೆ. ನೆಪೋಟಿಸಂ ಪ್ರಶ್ನೆ ಮಾಡಿ, ತೊತ್ತಿನ ಚೀಲದ ಮೇಲೆ ಕಲ್ಲು ಎತ್ತಿಹಾಕಿಕೊಳ್ಳಲು ಕಲಾವಿದರೂ ಸಿದ್ಧರಿಲ್ಲ. ಈಗೀಗ ‘ಇವನಾರವ’ ಎನ್ನುವುದು ಬಲವಾಗುತ್ತಿದ್ದು, ‘ಇವ ನಮ್ಮವ’ ಎನ್ನುವುದು ತೋರಿಕೆಗೆ ಮಾತ್ರ ಉಳಿಯುತ್ತಿದೆ. ‘ಇವ/ಇವಳು ಅವನ ಕಡೆಯವನು, ಮೊದಲು ಅವನನ್ನು/ ಅವಳನ್ನು ಕಿತ್ತಾಕಿ’ ಎನ್ನುವ ಕಟ್ಟಪ್ಪಣೆಗಳ ಪರಿಣಾಮ ಎಷ್ಟೋ ಮಂದಿ ಕಲಾವಿದರು ಸಿನಿಮಾಗಳಲ್ಲಿ ಅವಕಾಶಗಳು ಸಿಗದೆ, ಹೊತ್ತಿನ ಊಟ ಸಂಪಾದಿಸಿಕೊಳ್ಳುವುದೂ ಕಷ್ಟವಾಗುತ್ತಿದೆ. ನಾನೇ ಒಮ್ಮೆ ನೆಪೋಟಿಸಂಗೆ ತುತ್ತಾಗಿ ಪಾತ್ರ ಕಳೆದುಕೊಂಡು, ಚಿತ್ರದಿಂದ ಹೊರದಬ್ಬಿಸಿಕೊಂಡಿದ್ದೇನೆ’ ಎನ್ನುವಾಗ ಆ ಕಲಾವಿದನ ಧ್ವನಿ ಭಾರವಾಗುತ್ತಿತ್ತು, ಅವರ ಮಡದಿ ಸ್ವಲ್ಪ ಅನ್ನ ಬಡಿಸಲೇ ಎನ್ನುತ್ತಿದ್ದರು!

ಹೌದು, ಸಿನಿಮಾ ಕಲಾ ಮಾಧ್ಯಮ. ಸಿನಿಮಾರಂಗಕ್ಕೆ, ಸಿನಿಮಾ ಕಲಾವಿದನಿಗೆ ಭಾಷೆ, ಜಾತಿ, ಧರ್ಮದ ಹಂಗಿರಬಾರದು. ಕಲಾವಿದರೆಲ್ಲರೂ ಒಂದೇ ಜಾತಿ ಎನ್ನುವ ಭಾವ ಮಸುಕಾಗಬಾರದು, ಚಿತ್ರರಂಗ ಒಂದು ಕುಟುಂಬವಿದ್ದಂತೆ ಎನ್ನುವುದೂ ಬರೀ ತೋರಿಕೆಯೂ ಆಗಬಾರದಲ್ಲವೇ?.

ಇವತ್ತಿನ ಕಾಲಕ್ಕೆ ನೆಪೋಟಿಸಂನದೇ ಕೈಮೇಲಾಗಿದ್ದರೆ, ಲೂಸಿಯಾ, ರಂಗಿತರಂಗ, ಗೋಧಿ ಬಣ್ಣ ಸಾಧಾರಾಣ ಮೈಕಟ್ಟು, ರಾಮಾ ರಾಮಾ ರೇ, ಒಂದಲ್ಲ ಎರಡಲ್ಲಾ, ನಾತಿಚರಾಮಿ, ಒಂದು ಮೊಟ್ಟೆಯ ಕಥೆ, ತಿಥಿ, ಲವ್‌ಮಾಕ್ಟೇಲ್‌, 6–5=2, ಉಳಿದವರು ಕಂಡಂತೆ‌... ಹೀಗೆ ಸ್ಯಾಂಡಲ್‌ವುಡ್‌ನ ಶ್ರೀಮಂತಿಕೆ ಹೆಚ್ಚಿಸಿದ ಹಲವು ಸಿನಿಮಾಗಳು ಬರುತ್ತಿರಲಿಲ್ಲ ಎನ್ನುವುದನ್ನೂ ನಾವು ಮರೆಯಬಾರದು. ನೆಪೋಟಿಸಂ ಬಿಟ್ಟು, ಪ್ರತಿಭೆಗೆ ಮನ್ನಣೆ ನೀಡಿದರೆ ಒಳ್ಳೆಯ ಸಿನಿಮಾಗಳ ಭರಪೂರ ಫಸಲನ್ನು ಚಂದನವನದಲ್ಲಿ ಕಾಣಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.