
‘ಮಾರ್ಕ್’ ಚಿತ್ರದ ಹಾಡಿಗೆ ಸುದೀಪ್ ಜೊತೆ ಸಂಭ್ರಮಿಸಿದ ಚಿತ್ರತಂಡದ ಕಲಾವಿದರು
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಕಿಚ್ಚ ಸುದೀಪ್ ಅವರ ನಟನೆಯ ಬಹುನಿರೀಕ್ಷಿತ ‘ಮಾರ್ಕ್’ ಡಿ. 25ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದ್ದು, ಪ್ರಚಾರಾರ್ಥವಾಗಿ ಶನಿವಾರ ಹುಬ್ಬಳ್ಳಿ ನಗರದ ನೆಹರೂ ಮೈದಾನದಲ್ಲಿ ‘ಪ್ರೀ ರಿಲೀಸ್ ಇವೆಂಟ್’(ಮಾರ್ಕ್ ಉತ್ಸವ) ನಡೆಯಿತು. ಚಳಿಯನ್ನೂ ಲೆಕ್ಕಿಸದೇ ಪ್ರೇಕ್ಷಕರು ವಿವಿಧ ಕಲಾವಿದರ ಮನರಂಜನೆ ಕಾರ್ಯಕ್ರಮ ಆಸ್ವಾದಿಸುತ್ತ, ಸುದೀಪ್ ನಟನೆಯ ಚಿತ್ರದ ಡೈಲಾಗ್ ಕೇಳುತ್ತ ಸಂಭ್ರಮಿಸಿದರು.
ಸುದೀಪ್ ವೇದಿಕೆಗೆ ಬರುತ್ತಿದ್ದಂತೆ, ಪ್ರೇಕ್ಷಕರ ಹರ್ಷೋದ್ಘಾರ ಎಲ್ಲೇ ಮೀರಿತ್ತು. ತಮ್ಮ ನೆಚ್ಚಿನ ತಾರೆ ಸುದೀಪ್ ಅವರನ್ನು ಹತ್ತಿರದಿಂದ ನೋಡಿ, ಕಿಚ್ಚ... ಕಿಚ್ಚ... ಎಂದು ಕೂಗಿ ಕುಣಿದು ಕುಪ್ಪಳಿಸಿದರು. ‘ಹುಬ್ಬಳ್ಳಿ ಹೇಗಿದ್ದೀರ?’ ಎನ್ನುತ್ತಲೇ ಮಾತು ಆರಂಭಿಸಿದ ಅವರು, ಪರೋಕ್ಷವಾಗಿ ತಮ್ಮ ವಿರೋಧಿಗಳಿಗೆ ಮಾತಿನ ಛಾಟಿ ಬೀಸಿದರು.
‘ಮಾತನಾಡಲು ಸಾಕಷ್ಟಿದೆ. ನಿಯಂತ್ರಿಸಿಕೊಂಡು ಮಾತನಾಡುತ್ತೇನೆ. ಹುಬ್ಬಳ್ಳಿಯಲ್ಲಿ ನಿಂತು ಮಾತನಾಡಿದರೆ ಇಡೀ ಕರ್ನಾಟಕಕ್ಕೆ ತಿಳಿಯುತ್ತದೆ. ಎಲ್ಲಿ, ಯಾರಿಗೆ ಹೇಗೆ ತಟ್ಟಬೇಕು ಎನ್ನುವುದು ಭರ್ಜರಿಯಾಗಿ ತಟ್ಟುತ್ತದೆ. ಡಿ. 25ರಂದು ಚಿತ್ರ ಮಂದಿರದ ಒಳಗೆ ‘ಮಾರ್ಕ್’ ಬಿಡುಗಡೆಯಾದರೆ, ಹೊರಗಡೆ ಒಂದು ಪಡೆ ಯುದ್ದಕ್ಕೆ ಸಿದ್ಧವಾಗಿ ನಿಂತಿರುತ್ತದೆ. ನಾವು ಯುದ್ಧಕ್ಕೂ ಸಿದ್ಧ, ಮಾತಿಗೂ ಬದ್ಧ’ ಎಂದರು.
‘ಮೌನವಾಗಿರುವುದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ, ನಿಮಗೋಸ್ಕರ, ಎಲ್ಲರೂ ಚೆನ್ನಾಗಿರಬೇಕು ಹಾಗೂ ಒಳ್ಳೆಯ ಹೆಸರು ಇಟ್ಟುಕೊಳ್ಳಬೇಕು ಎನ್ನುವ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡು ಇದ್ದೇನೆ. ಮಾತನಾಡಲು ಬರುವುದಿಲ್ಲ ಎಂದಲ್ಲ. ನನ್ನ ಸಹನೆಯಿಂದ ಬಹಳಷ್ಟು ಕಲ್ಲು ತೂರಾಟ ನಡೆಯುತ್ತಿದೆ. ನೀವು ಸಹಿಸಿಕೊಳ್ಳುತ್ತ ಇದ್ದೀರಿ. ಈಗ ಹೇಳುತ್ತಿದ್ದೇನೆ, ಸಹಿಸಿಕೊಳ್ಳುವವರೆಗೂ ತಡೆಯಿರಿ, ಮಾತನಾಡುವ ಸಮಯಕ್ಕೆ ಮಾತನಾಡಿ’ ಎಂದು ಹೇಳಿದರು.
‘ಮಾರ್ಕ್’ ಅದ್ಭುತ ಸಿನಿಮಾವಾಗಿದ್ದು, ಸತ್ಯಜ್ಯೋತಿ ಫೀಲ್ಮ್ಸ್ ಮತ್ತು ನಿರ್ದೇಶಕ ವಿಜಯ ಕಾರ್ತಿಕೇಯನ್ ಈ ರೀತಿ ಚಿತ್ರ ಮೂಡಿಬರಲು ಕಾರಣ. ಪತ್ನಿ ಸುಪ್ರಿಯಾ ಮತ್ತು ಮಗಳು ಸಾನ್ವಿ ಅವರ ಸಹಕಾರವನ್ನು ಮರೆಯುವಂತಿಲ್ಲ. ಚಿತ್ರಕ್ಕಾಗಿ ಶ್ರಮಿಸಿದ ಎಲ್ಲರಿಗೂ ಆಭಾರಿ, ಥ್ಯಾಂಕ್ಯೂ ಹುಬ್ಬಳ್ಳಿ’ ಎನ್ನುತ್ತ ಪ್ರೇಕ್ಷಕರ ಕಡೆ ಕೈ ಬೀಸಿದರು.
‘ಹದ್ದು ಹಾರಡ್ಕೊಂಡು ಬರೋದು ಲೇಟ್ ಆಗ್ಬೋದು, ಚಿರತೆ ಓಡ್ಕೊಂಡು ಬರೋದು ಲೇಟ್ ಆಗ್ಬೋದು.. ಆದ್ರೆ ಇದು ಮಾರ್ಕ್’ ಎನ್ನುವ ಟ್ರೇಲರ್‌ನಲ್ಲಿರುವ ಡೈಲಾಗ್ ಅಭಿಮಾನಿಗಳಿಗೆ ಚಳಿಯಲ್ಲೂ ಬಿಸಿಯೇರಿಸಿತ್ತು. ಟ್ರೇಲರ್ ಕೊನೆಯಲ್ಲಿ ಬರುವ ‘ಧಮ್ ಹೊಡೆಯೋದು ಕಮ್ಮಿ ಮಾಡಬೇಕಲೆ’ ಡೈಲಾಗ್ ಸಹ ಪ್ರೇಕ್ಷಕರನ್ನು ಮನರಂಜಿಸಿತ್ತು.
ಸುದೀಪ್ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದೂ ಅಲ್ಲದೆ, ಸಹ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಿಂದಿನ ‘ಮ್ಯಾಕ್ಸ್’ ಸಿನಿಮಾದ ತಂತ್ರಜ್ಞರ ತಂಡವೇ ಈ ‘ಮಾರ್ಕ್’ ಸಿನಿಮಾದಲ್ಲೂ ಜೊತೆಯಾಗಿದೆ. ರೋಶಿನಿ ಪ್ರಕಾಶ್, ಯೋಗಿ ಬಾಬು, ನವೀನ್ ಚಂದ್ರ, ದೀಪಿಕಾ, ಗುರು ಸೋಮಸುಂದರಂ ಹಾಗೂ ಇತರರು ನಟಿಸಿದ್ದಾರೆ. ಅಜನೀಶ್ ಲೋಕನಾಥ ಸಂಗೀತ, ಶೇಖರ್ ಚಂದ್ರ ಛಾಯಾಚಿತ್ರಗ್ರಹಣವಿದೆ.
ಸುದೀಪ್ ಹಿಂದಿನ ‘ಮ್ಯಾಕ್ಸ್’ ರೀತಿಯದ್ದೇ ಕಥೆ ಈ ಚಿತ್ರದಲ್ಲಿದೆ.
ಎಸ್‌ಪಿ ಅಜಯ್ ಮಾರ್ಕಾಂಡೇಯ ಅಲಿಯಾಸ್ ‘ಮಾರ್ಕ್’ ಆಗಿ ಸುದೀಪ್ ನಟಿಸಿದ್ದಾರೆ. ಆದಿಕೇಶವ ಮುಖ್ಯಮಂತ್ರಿ ಆಗಲು ಏನೂ ಬೇಕಾದರೂ ಮಾಡುತ್ತಾನೆ. ಈ ಕಾರಣಕ್ಕಾಗಿಯೇ ‘ಮಾರ್ಕ್’ ಅಮಾನತಾಗುತ್ತಾನೆ. ಆದಿಕೇಶವನ ಬಣ್ಣ ಬಯಲು ಮಾಡಲು ‘ಮಾರ್ಕ್’ಗೆ ಅವಕಾಶವೊಂದು ಸಿಗುತ್ತದೆ. ಅದನ್ನು ಉಪಯೋಗಿಸಿಕೊಂಡು ಹೇಗೆ ದುಷ್ಟರನ್ನು ಸದೆಬಡೆಯುತ್ತಾನೆ ಎನ್ನುವುದು ಚಿತ್ರದ ತಿರುಳೆಂದು ಟ್ರೇಲರ್‌ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.