ADVERTISEMENT

ಲೈಂಗಿಕ ಕಿರುಕುಳದ ವಿರುದ್ಧ ಮಾತನಾಡುತ್ತಿರಿ ಎಂದ ಚಿನ್ಮಯಿ ಶ್ರೀಪಾದ

ಸದ್ದು ಮಾಡಿದ ‘ಮಾಸ್ಟರ್’ ನ ಡಿಲೀಟ್‌ ಆದ ದೃಶ್ಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 7:28 IST
Last Updated 8 ಫೆಬ್ರುವರಿ 2021, 7:28 IST
ಚಿನ್ಮಯಿ ಶ್ರೀಪಾದ
ಚಿನ್ಮಯಿ ಶ್ರೀಪಾದ   

ದಳಪತಿ ವಿಜಯ್‌ ಮತ್ತು ವಿಜಯ್‌ ಸೇತುಪತಿ ಅಭಿನಯದ ಮಾಸ್ಟರ್‌ ಚಿತ್ರದಲ್ಲಿ ಡಿಲೀಟ್‌ ಮಾಡಲಾದ ತುಣುಕೊಂದು ಜಾಲತಾಣಗಳಲ್ಲಿ ಸದ್ದು ಮಾಡಿದೆ.

ಸವಿತಾ ಎಂಬ ವಿದ್ಯಾರ್ಥಿನಿಗೆ ಕಾಲೇಜು ವಿದ್ಯಾರ್ಥಿಯೊಬ್ಬ ಲೈಂಗಿಕ ಕಿರುಕುಳ ನೀಡಿರುತ್ತಾನೆ. ವಿಚಾರಣೆಯ ಕೊನೆಯಲ್ಲಿ ಕಾಲೇಜು ಆಡಳಿತದ ಮಧ್ಯಸ್ಥಿಕೆಯಲ್ಲಿ ಸವಿತಾ ಹೆತ್ತವರು ರಾಜಿಗೆ ಬರುತ್ತಾರೆ. ಆಗ ನಾಯಕ ಮಧ್ಯ ಪ್ರವೇಶಿಸಿ ಪ್ರಾಂಶುಪಾಲರು ಮತ್ತು ಕಿರುಕುಳ ಕೊಟ್ಟವರನ್ನು ತರಾಟೆಗೆ ತೆಗೆದುಕೊಳ್ಳುವ ದೃಶ್ಯ ಇಲ್ಲಿದೆ.

ಆದರೆ, ಅದ್ಯಾಕೋ ಈ ಸನ್ನಿವೇಶ ಈಗ ಬಿಡುಗಡೆಯಾದ ಚಿತ್ರದಲ್ಲಿ ಇಲ್ಲ. ಆಮೇಜಾನ್ ಪ್ರೈಮ್‌ ವಿಡಿಯೋದಲ್ಲೂ ಇಲ್ಲ. ಅದೇನನಿಸಿತೋ ಗೊತ್ತಿಲ್ಲ. ಈಗ ಚಿತ್ರತಂಡವೇ ಅದನ್ನು ಹೊರ ಹಾಕಿದೆ. ಈಗ ಆ ದೃಶ್ಯ ಅಮೆಜಾನ್‌ ಪ್ರೈಮ್‌ನ ಯೂಟ್ಯೂಬ್‌ ಚಾನೆಲ್‌, ಪ್ರೈಮ್‌ ವಿಡಿಯೋದಲ್ಲಿ ಲಭ್ಯವಿದೆ.

ADVERTISEMENT

ಮತ್ತೆ ಸುದ್ದಿಯಲ್ಲಿ ಚಿನ್ಮಯಿ ಶ್ರೀಪಾದ...

ತಮಿಳಿನ ಖ್ಯಾತ ಚಿತ್ರ ಸಾಹಿತಿ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಡಬ್ಬಿಂಗ್‌ ಕಲಾವಿದೆ, ಗಾಯಕಿ ಚಿನ್ಮಯಿ ಶ್ರೀಪಾದ ಅವರೂ ಕೂಡ ಈ ದೃಶ್ಯದ ತುಣುಕನ್ನು ಟ್ವಿಟರ್‌ನಲ್ಲಿ ಹರಿಯಬಿಟ್ಟು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಅವರೊಂದಿಗೆ ವೈರಮುತ್ತು ಅವರೊಂದಿಗೆ ಕೆಲಸ ಮಾಡಿದಾಗ ಕಿರುಕುಳ ಅನುಭವಿಸಿದ ಹಲವಾರು ಗಾಯಕರು, ಕಲಾವಿದರು ಇದೇ ತುಣುಕನ್ನು ಹಂಚಿಕೊಂಡಿದ್ದಾರೆ. ಮನೋರಂಜನಾ ಕ್ಷೇತ್ರದಲ್ಲಿರುವ ಈ ಕರಾಳ ಮುಖದ ಬಗ್ಗೆ ಚರ್ಚಿಸಲು ಆರಂಭಿಸಿದ್ದಾರೆ.

ಚಿನ್ಮಯಿ ಹೇಳಿದ್ದು ಹೀಗೆ, ‘ಈ ದೃಶ್ಯವನ್ನು ಬರೆದ ನಿರ್ದೇಶಕರಿಗೆ ನಾನು ಆಭಾರಿಯಾಗಿದ್ದೇನೆ. ಮುಂದೊಂದು ದಿನ ಕಿರುಕುಳಕ್ಕೊಳಗಾದ ಸಂತ್ರಸ್ತರೇ ಟೀಕೆಗೊಳಗಾಗಲಾರರು. ವೈರಮುತ್ತು, ರಾಧಾರವಿ ಮತ್ತು ಎಂಜೆ ಅಕ್ಬರ್‌ನಂಥರ ಹೊರತಾಗಿಯೂ ಇಂಥ ವಿಚಾರಗಳ ಬಗ್ಗೆ ಮಾತನಾಡುತ್ತಿರಬೇಕಾಗುತ್ತದೆ’ ಎಂದು ಚಿನ್ಮಯಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.