ADVERTISEMENT

ಕನ್ನಡ– ಮಲಯಾಳಂನಲ್ಲಿ ಹರಿದ ‘ಮಾಯಾ ಗಂಗೆ’

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 9:46 IST
Last Updated 29 ಜೂನ್ 2022, 9:46 IST
ಝೈದ್‌ ಖಾನ್‌, ಸೋನಲ್‌ ಮೋಂತೇರೋ
ಝೈದ್‌ ಖಾನ್‌, ಸೋನಲ್‌ ಮೋಂತೇರೋ   

ಜಯತೀರ್ಥ ನಿರ್ದೇಶನದಲ್ಲಿ ಝೈದ್ ಖಾನ್ ಹಾಗೂ ಸೋನಾಲ್ ಮೊಂತೆರೊ ನಾಯಕ-ನಾಯಕಿಯಾಗಿ ನಟಿಸಿರುವ ‘ಬನಾರಸ್’ ಚಿತ್ರದ ಮೊದಲ ಹಾಡು ‘ಮಾಯಾಗಂಗೆ’ ಇತ್ತೀಚೆಗೆ ಬಿಡುಗಡೆಯಾಗಿದೆ. ಕನ್ನಡ ಹಾಗೂ ಮಲೆಯಾಳಂ ಭಾಷೆಯ ಹಾಡುಗಳನ್ನು ಏಕಕಾಲಕ್ಕೆ ಬಿಡುಗಡೆ ಮಾಡಲಾಯಿತು.

ಡಾ.ವಿ.ನಾಗೇಂದ್ರಪ್ರಸಾದ್ ಬರೆದಿರುವ ‘ಮಾಯಾಗಂಗೆ’ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಮಲೆಯಾಳಂನಲ್ಲಿ ಆದಿ ಈ ಹಾಡನ್ನು ಬರೆದಿದ್ದಾರೆ. ನಿರ್ಮಾಪಕಿ ಶೈಲಜಾನಾಗ್ ಈ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಿದರು. ತಿಲಕ್‌ರಾಜ್‌ ಬಲ್ಲಾಳ್‌ ಈ ಚಿತ್ರದ ನಿರ್ಮಾಪಕ.

‘ಕಾಶಿ ವೈರಾಗ್ಯದ ಸಂಕೇತ ಅಲ್ಲಿ ಪ್ರೀತಿಯ ಕಥೆ ಬರೆಯಲು ನನ್ನ ಗೆಳೆಯ ಜಯತೀರ್ಥನಿಗೆ ಮಾತ್ರ ಸಾಧ್ಯ. ಪಕ್ಕದಲ್ಲೇ ಚಿತೆ ಉರಿಯುತ್ತಿರುತ್ತದೆ. ಅಲ್ಲಿ ನಾಯಕ- ನಾಯಕಿ ಪ್ರೇಮ ಆರಂಭವಾಗುತ್ತದೆ. ಈ ಸನ್ನಿವೇಶಕ್ಕೆ ತಕ್ಕ ಹಾಡು ಬರೆಯಬೇಕು. ಇದು ಮಾಮೂಲಿ ಪ್ರೇಮಗೀತೆಯ ತರಹ ಬೇಡ ಎಂದು ಜಯತೀರ್ಥ ವಿವರಿಸಿದಾಗ, ಈ ‘ಮಾಯಾಗಂಗೆ’ ಹಾಡು ಬರೆದೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಅದ್ವೈತ ಛಾಯಾಗ್ರಹಣ ಹಾಡಿನ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದರು ಡಾ.ವಿ.ನಾಗೇಂದ್ರಪ್ರಸಾದ್.

ADVERTISEMENT

‘‘ಬನಾರಸ್’ ನನ್ನ ಮನಸ್ಸಿಗೆ ಹತ್ತಿರವಾದ ಸಿನಿಮಾ. ಇಂತಹ ಅದ್ಭುತ ಹಾಡನ್ನು ಬರೆದಿರುವ ನಾಗೇಂದ್ರಪ್ರಸಾದ್ ಅವರಿಗೆ ಧನ್ಯವಾದ. ಝೈದ್ ಖಾನ್ ಈ ಹಾಡಿನಲ್ಲಿ ತುಂಬಾ ಚೆನ್ನಾಗಿ ಕಾಣುತ್ತಾರೆ. ಜಯತೀರ್ಥ ಅವರ ನಿರ್ದೇಶನ ಉತ್ತಮವಾಗಿದೆ. ಮುಂದೆ ಇನ್ನೂ ಮೂರು ಹಾಡುಗಳು ಬಿಡುಗಡೆಯಾಗಲಿದೆ. ನಿಮ್ಮ ಪ್ರೋತ್ಸಾಹವಿರಲಿ’ ಎಂದರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್.

‘ನಾನು ನಾಗೇಂದ್ರಪ್ರಸಾದ್ ಅವರಿಗೆ ಈ ಹಾಡಿನ ಸನ್ನಿವೇಶ ವಿವರಿಸಿದೆ. ನಾವೊಂದಿಷ್ಟು ಜನ ಸೇರಿ ಈ ಹಾಡು ಹೀಗೆ ಬರಬೇಕು ಅಂದುಕೊಂಡೆವು. ಅದೇ ರೀತಿ ನಾಗೇಂದ್ರಪ್ರಸಾದ್ ಅದ್ಭುತವಾಗಿ ಹಾಡು ಬರೆದುಕೊಟ್ಟಿದ್ದಾರೆ. ಅಜನೀಶ್ ಅಷ್ಟೇ ಸೊಗಸಾಗಿ ಸಂಗೀತ ನೀಡಿದ್ದಾರೆ. ಅದ್ವೈತ ಅಂದವಾಗಿ ಛಾಯಾಗ್ರಹಣ ಮಾಡಿದ್ದಾರೆ. ಕನ್ನಡ ಹಾಗೂ ಮಲೆಯಾಳಂ ಎರಡು ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಗಿದೆ. ಮಲಯಾಳಂನಲ್ಲಿ ಹಾಡು ಬರೆಸಲು ಆದಿ ಅವರನ್ನು ಪರಿಚಯಿಸಿದ್ದು ನನ್ನ ಗೆಳೆಯ ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್ ರಾಜ್’ ಎಂದರು.

‘ಕಾಶಿಯಲ್ಲಿ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಅದನೆಲ್ಲಾ ಸಾಧ್ಯ ಮಾಡಿದ್ದ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಅವರಿಗೆ ಧನ್ಯವಾದ. ಆಲ್ಲಿನ 84 ಘಾಟ್‌ಗಳಲ್ಲೂ ನಮ್ಮ ಚಿತ್ರದ ಚಿತ್ರೀಕರಣ ನಡೆದಿದೆ. ಇನ್ನೂ ನಾಯಕ - ನಾಯಕಿ ನನ್ನ ಮಕ್ಕಳಿದಂತೆ. ಝೈದ್ ಖಾನ್ ನನ್ನ ಬಳಿ ಬಂದು ನಿರ್ದೇಶನ ಮಾಡಬೇಕು ಎಂದರು. ನಾನು ಅವರಿಗೆ ನೀವು ಹೆಸರಾಂತ ರಾಜಕಾರಣಿಯ ಮಗ. ನಿಮಗೆ ನಾನು ನಟನೆ ಕಲಿಸಬೇಕಾದರೆ ಸ್ವಲ್ಪ ಕಷ್ಟವಾಗಬಹುದು ಅಂದೆ. ಅದಕ್ಕೆ ಅವರು ಚಪ್ಪಲಿ ಬಿಟ್ಟು ಕೆಳಗೆ ಕುಳಿತು, ನೀವು ಹೇಳಿ ಕೊಟ್ಟಿದ್ದನ್ನು ಮಾಡುತ್ತೇನೆ ಎಂದರು. ಹಾಗೆ ಮಾಡಿದರು. ಅವರು ಈ ಕಥೆಯನ್ನು ಆಯ್ಕೆ ಮಾಡಿಕೊಂಡಾಗಲೇ ಗೆದ್ದರು. ಅದರ ಫಲಿತಾಂಶ ಈಗ ಗೊತ್ತಾಗುತ್ತಿದೆ. ಸೋನಾಲ್ ಅವರ ಅಭಿನಯ ಕೂಡ ಚೆನ್ನಾಗಿದೆ. ಸೆನ್ಸಾರ್ ಕೂಡ ಮುಗಿದಿದೆ. ಸದ್ಯದಲ್ಲೇ ‘ಬನಾರಸ್’ ನಿಮ್ಮ ಮುಂದೆ ಬರಲಿದೆ’ ಎಂದರು ನಿರ್ದೇಶಕ ಜಯತೀರ್ಥ.

‘ಇದು ನನ್ನ ಡ್ರೀಮ್ ಪ್ರಾಜೆಕ್ಟ್. ಈ ನನ್ನ ಕನಸಿಗೆ ಆಸರೆಯಾಗಿದ್ದು ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಅವರು. ತಿಲಕ್ ಸರ್ ನನ್ನ ಗಾಡ್ ಫಾದರ್‌. ಮುಂಬೈಗೆ ನನ್ನನ್ನು ಕರೆದುಕೊಂಡು ಹೋಗಿ, ನಟನಾ ಶಾಲೆಗೆ ಸೇರಿಸಿ, ನಂತರ ಈ ಚಿತ್ರ ನಿರ್ಮಿಸಿದರು. ನಮ್ಮ ‘ಬನಾರಸ್’ ಅನ್ನು ಪ್ಯಾನ್ ಇಂಡಿಯಾ ಚಿತ್ರವಾಗಿಸಿ ಎಲ್ಲಾ ಕಡೆ ಬಿಡುಗಡೆ ಮಾಡುತ್ತಿದ್ದಾರೆ.‌ ನಿರ್ದೇಶಕ ಜಯತೀರ್ಥ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಸೋನಾಲ್ ಅವರು ಅದ್ಭುತ ನಟಿ’ ಎಂದರು ನಾಯಕ ಝೈದ್ ಖಾನ್.

‘ನನಗೆ ಇದು ವಿಶೇಷ ಸಿನಿಮಾ. ಧನಿ ಎಂಬ ಪಾತ್ರ ನೀಡಿದ್ದ ಜಯತೀರ್ಥ ಅವರಿಗೆ ಧನ್ಯವಾದ. ಮೋಷನ್ ಪೋಸ್ಟರ್ ರಿಲೀಸ್ ಆದ ಮೇಲೆ ಎಲ್ಲೇ ಹೋದರೂ ಈ ಚಿತ್ರದ ಬಗ್ಗೆ ಕೇಳುತ್ತಿದ್ದಾರೆ. ಝೈದ್ ಅವರ ಅಭಿನಯ ಚೆನ್ನಾಗಿದೆ. ಅವಕಾಶ ಕೊಟ್ಟ ನಿರ್ಮಾಪಕರಿಗೆ ಹಾಗೂ ಇಲ್ಲಿ ಬಂದಿರುವ ಗಣ್ಯರಿಗೆ ಧನ್ಯವಾದ’ ಎಂದರು ನಾಯಕಿ ಸೋನಾಲ್ ಮೊಂತೆರೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.