ADVERTISEMENT

ಸಿನಿಮಾದಿಂದ IPLನತ್ತ ಹೊಂಬಾಳೆ ಚಿತ್ತ: RCB ಮಾಲೀಕತ್ವಕ್ಕೆ ಮುಂದಾದರೇ ಕಿರಗಂದೂರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2025, 10:16 IST
Last Updated 20 ನವೆಂಬರ್ 2025, 10:16 IST
<div class="paragraphs"><p>ಹೊಂಬಾಳೆ ಸಿನಿಮಾ ಹಾಗೂ ಆರ್‌ಸಿಬಿ ಲೋಗೊ:</p></div>

ಹೊಂಬಾಳೆ ಸಿನಿಮಾ ಹಾಗೂ ಆರ್‌ಸಿಬಿ ಲೋಗೊ:

   

ಚಿತ್ರ:ಡೆಕ್ಕನ್ ಹೆರಾಲ್ಡ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ಚಾಂಪಿಯನ್ ಆದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾರಾಟಕ್ಕೆ ಸಿದ್ಧವಾಗಿದೆ ಎಂಬ ವರದಿಗಳು ಹರಿದಾಡಲು ಪ್ರಾರಂಭವಾಗಿದೆ. ಮಾತ್ರವಲ್ಲ, ತಂಡ ಮುಂದಿನ ಋತುವಿನ ಆರಂಭಕ್ಕೆ ಮೊದಲು ಮಾಲೀಕತ್ವದಲ್ಲಿ ಬದಲಾವಣೆಯಾಗಲಿದೆ ಎಂದು ವರದಿಗಳು ತಿಳಿಸಿವೆ.

ADVERTISEMENT

ಸದ್ಯ, ತಂಡದ ಮಾಲೀಕತ್ವ ಹೊಂದಿರುವ ಡಿಯಾಜಿಯೊ ಇಂಡಿಯಾ ಮಾರಾಟದ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಆರ್‌ಸಿಬಿ ತಂಡವನ್ನು ಖರೀದಿಸಲು ಬೆಂಗಳೂರು ಮೂಲದ ಹೊಂಬಾಳೆ ಫಿಲ್ಮ್ಸ್ ಮುಂಚೂಣಿಯಲ್ಲಿದೆ ಮತ್ತು ಫ್ರಾಂಚೈಸಿಯಲ್ಲಿ ಭಾಗಶಃ ಮಾಲೀಕತ್ವದ ಪಾಲನ್ನು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಒಂದುವೇಳೆ, ಈ ಮಾಹಿತಿ ನಿಜವಾದರೆ ಕರ್ನಾಟದಲ್ಲಿ ಸಿನಿಮಾ ಮತ್ತು ಕ್ರಿಕೆಟ್‌ನ ಹೊಸ ವಿಲೀನಕ್ಕೆ ರೂಪ ಸಿಕ್ಕಂತಾಗುತ್ತದೆ. ಸಿನಿಮಾ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲ್ಮ್ಸ್‌ನ ಮಾಲೀಕ ವಿಜಯ್ ಕಿರಗಂದೂರು ಅವರು ಆರ್‌ಸಿಬಿ ತಂಡದ ಸಹ-ಮಾಲೀಕರಾಗಿ ಅಧಿಕಾರ ವಹಿಸಿಕೊಳ್ಳುವ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೊಂಬಾಳೆ ಫಿಲ್ಮ್ಸ್ 2023ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕೃತ ಡಿಜಿಟಲ್ ಪಾಲುದಾರನಾಗಿ ತಂಡದ ಜೊತೆಗೆ ಸಂಬಂಧ ಹೊಂದಿದೆ.

ಹೊಂಬಾಳೆ ಫಿಲ್ಮ್ಸ್‌ನ ಸಂಸ್ಥಾಪಕರಾಗಿರುವ ವಿಜಯ್ ಕಿರಗಂದೂರು ಅವರು ಸಂಸ್ಥೆಯ ನಿವ್ವಳ ಮೌಲ್ಯ ಎಷ್ಟು ಎಂಬ ಮಾಹಿತಿಯನ್ನು ಇದುವರೆಗೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೂ ₹3,000 ಕೋಟಿ ನಿವ್ವಳ ಮೌಲ್ಯ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ವಿಜಯ್ ಕಿರಗಂದೂರು ಮತ್ತು ಚಲುವೇಗೌಡರು 2012ರಲ್ಲಿ ಸ್ಥಾಪಿಸಿರುವ ಹೊಂಬಾಳೆ ಫಿಲ್ಮ್ಸ್, ಕರ್ನಾಟಕದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿದೆ. ರಂಗಿತರಂಗ, ರಾಜಕುಮಾರ, ಕೆಜಿಎಫ್, ಕಾಂತಾರದಂತಹ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ ಹಿರಿಮೆ ಈ ಸಂಸ್ಥೆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.