ADVERTISEMENT

ಒಂದು ವರ್ಷ ಸುಶಾಂತ್‌ ಜೊತೆಯಲ್ಲಿದ್ದೆ, ಜೂನ್‌ 8ರಂದು ತೊರೆದು ಹೋಗಿದ್ದೆ: ರಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2020, 3:16 IST
Last Updated 31 ಜುಲೈ 2020, 3:16 IST
ನಟ ಸುಶಾಂತ್ ಸಿಂಗ್‌ ರಜಪೂತ್‌ ಮತ್ತು ರಿಯಾ ಚಕ್ರವರ್ತಿ- ಇನ್‌ಸ್ಟಾಗ್ರಾಮ್‌ ಚಿತ್ರ
ನಟ ಸುಶಾಂತ್ ಸಿಂಗ್‌ ರಜಪೂತ್‌ ಮತ್ತು ರಿಯಾ ಚಕ್ರವರ್ತಿ- ಇನ್‌ಸ್ಟಾಗ್ರಾಮ್‌ ಚಿತ್ರ   

ನವದೆಹಲಿ: ನಟ ಸುಶಾಂತ್‌ ಸಿಂಗ್‌ ರಜಪೂತ್‌ ಜೊತೆ ಒಂದು ವರ್ಷ ವಾಸವಿದ್ದೆ, ಜೂನ್‌ 8ರಂದು ಅವರ ಮನೆ ತೊರೆದು ತಾತ್ಕಾಲಿಕ ನಿವಾಸಕ್ಕೆ ಸ್ಥಳಾಂತರಗೊಂಡಿದ್ದೆ ಎಂದು ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ರಿಯಾ ಚಕ್ರವರ್ತಿ ಸ್ಥಳಾಂತರಗೊಂಡ ಆರು ದಿನಗಳ ನಂತರ ಮುಂಬೈನ ತಮ್ಮ ನಿವಾಸದಲ್ಲಿ ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಮಾಡಿಕೊಂಡಿದ್ದರು.

ರಿಯಾ ಚಕ್ರವರ್ತಿ ಹಣಕಾಸು ವಿಚಾರದಲ್ಲಿ ಸುಶಾಂತ್‌ಗೆ ಮೋಸ ಮಾಡಿದ್ದಾರೆ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ. ಈ ಕಾರಣಕ್ಕೆ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸುಶಾಂತ್‌ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಬಿಹಾರ ರಾಜಧಾನಿ ಪಟನಾದಲ್ಲಿ ಈ ದೂರು ದಾಖಲಾಗಿತ್ತು.

ADVERTISEMENT

ಆ ಹಿನ್ನೆಲೆಯಲ್ಲಿ, ರಿಯಾ ಚಕ್ರವರ್ತಿ ತಮ್ಮ ವಿರುದ್ಧದ ಪ್ರಕರಣವನ್ನು ಪಟನಾದಿಂದ ಮುಂಬೈಗೆ ವರ್ಗಾವಣೆ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆಂದು ಎನ್‌ಡಿಟಿವಿ ವರದಿ ಮಾಡಿದೆ.

'ನಟ ಸುಶಾಂತ್‌ ಮತ್ತು ನಾನು ಜೂನ್‌ 8ರ ವರೆಗೂ ಲಿವ್‌-ಇನ್‌ ಸಂಬಂಧದಲ್ಲಿದ್ದೆವು. ನಂತರ ನಾನು ತಾತ್ಕಾಲಿಕವಾಗಿ ಬೇರೆ ನಿವಾಸಕ್ಕೆ ಸ್ಥಳಾಂತರಗೊಂಡಿದ್ದೆ. ಸುಶಾಂತ್‌ ಖಿನ್ನತೆಯಿಂದ ಬಳಲುತ್ತಿದ್ದರು' ಎಂದು ರಿಯಾ ಅರ್ಜಿಯಲ್ಲಿ ತಿಳಿಸಿದ್ದಾರೆ.

ಸುಶಾಂತ್‌ ಸಾವು ಬಾಲಿವುಡ್‌ನಲ್ಲಿ ಭಾರಿ ವಿವಾದವನ್ನು ಸೃಷ್ಟಿಸಿದೆ. ಅವರ ಆತ್ಮಹತ್ಯೆಯ ಬೆನ್ನಲ್ಲೇ ಹಿಂದಿ ಚಿತ್ರರಂಗದಲ್ಲಿ ಸ್ವಜನಪಕ್ಷಪಾತದ ಬಗೆಗಿನ ಆರೋಪ ವ್ಯಾಪಕವಾಗಿ ಕೇಳಿಬಂದಿದೆ.

ಸುಶಾಂತ್‌ ಸಾವಿನ ತನಿಖೆ ಮುಂದುವರೆಸಿರುವ ಮುಂಬೈ ಪೊಲೀಸರು ಈಗಾಗಲೇ ರಿಯಾ ಚಕ್ರವರ್ತಿ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ನಿರ್ಮಾಪಕರಾದ ಆದಿತ್ಯ ಚೋಪ್ರಾ, ಶೇಖರ್ ಕಪೂರ್ ಮತ್ತು ಪತ್ರಕರ್ತ ರಾಜೀವ್ ಮಸಂದ್ ಸೇರಿದಂತೆ 40ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ್ದಾರೆ.

ಈ ನಡುವೆ ಸುಶಾಂತ್‌ ತಂದೆ ತಮ್ಮ ಪ್ರಭಾವ ಬಳಸಿ ನನ್ನ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ ಎಂದು ರಿಯಾ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.