ADVERTISEMENT

ನಟ ಪುನೀತ್‌ಗೆ ಮೈಸೂರು ವಿ.ವಿ ಮರಣೋತ್ತರ ಗೌರವ ಡಾಕ್ಟರೇಟ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 21:11 IST
Last Updated 13 ಮಾರ್ಚ್ 2022, 21:11 IST
ಪುನೀತ್‌
ಪುನೀತ್‌   

ಮೈಸೂರು: ವಿಜ್ಞಾನಿ ‌‌ಡಾ.ವಿ.ಕೆ.ಆತ್ರೆ, ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಹಾಗೂ ಜಾನಪದ ಕಲಾವಿದ ಎಂ.ಮಹದೇವಸ್ವಾಮಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಕಟಿಸಿದೆ.

‘ಪುನೀತ್‌ ಅವರ ಸಾಮಾಜಿಕ ಸೇವಾ ಕಾರ್ಯ ಹಾಗೂ ಚಿತ್ರರಂಗದಲ್ಲಿನ ಸಾಧನೆ ಪರಿಗಣಿಸಿ ಮರಣೋತ್ತರ
ವಾಗಿ ಗೌರವ ಡಾಕ್ಟರೇಟ್ ನೀಡುತ್ತಿದ್ದೇವೆ. ಅವರ ಜನ್ಮದಿನಕ್ಕೆ ವಿಶ್ವವಿದ್ಯಾಲಯ ನೀಡುತ್ತಿರುವ ಪುಟ್ಟ ಉಡುಗೊರೆ ಇದು. ಪುನೀತ್‌ ಅವರ ಪತ್ನಿ ಅಶ್ವಿನಿ ಅವರು ಘಟಿಕೋತ್ಸವಕ್ಕೆ ಬರಲು ಒಪ್ಪಿದ್ದಾರೆ. ಡಾ.ರಾಜ್‌ಕುಮಾರ್ ಅವರಿಗೆ 1976ರಲ್ಲಿ ನಮ್ಮ ವಿಶ್ವವಿದ್ಯಾಲಯದಿಂದಲೇ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು. ಅಪ್ಪ ಹಾಗೂ ಮಗನಿಗೆ ಒಂದೇ ವಿಶ್ವವಿದ್ಯಾಲಯದಿಂದ ಈ ಗೌರವ ಲಭಿಸಿದೆ’ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಡಾ.ವಾಸುದೇವ ಕಲ್ಕುಂಟೆ ಆತ್ರೆ ಶ್ರೇಷ್ಠ ವಿಜ್ಞಾನಿ. ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು. ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿ, ಡಿಆರ್‌ಡಿಒ ಸಂಸ್ಥೆ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಮಳವಳ್ಳಿಯ ಮಹ‌ದೇವಸ್ವಾಮಿ, ಮಹದೇಶ್ವರನ ಮೇಲೆ ಭಕ್ತಿಗೀತೆ ಹಾಡಿ ಪ್ರಸಿದ್ಧರಾಗಿದ್ದು, 80ಕ್ಕೂ ಅಧಿಕ ಕಲಾತಂಡಗಳಿಗೆ ತರಬೇತಿ ನೀಡಿದ್ದಾರೆ. ಜಾನಪದ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ’ ಎಂದು ಹೇಳಿದರು.

‘ಮಾರ್ಚ್ 22ರಂದು, 102ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಪದವಿ ಪ್ರದಾನ ಮಾಡುವರು. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್‌ನ (ನ್ಯಾಕ್‌) ನಿರ್ದೇಶಕ ಪ್ರೊ.ಎಸ್‌.ಸಿ.ಶರ್ಮ ಘಟಿಕೋತ್ಸವ ಭಾಷಣ ಮಾಡಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಭಾಗವಹಿಸಲಿದ್ದಾರೆ‌’ ಎಂದರು.

‘ಎಂ.ಎಸ್ಸಿ ರಸಾಯನ ವಿಜ್ಞಾನ ವಿದ್ಯಾರ್ಥಿನಿ ಜಿ.ಎಂ.ಭಾವನಾ 19 ಸ್ವರ್ಣ ಪದಕ ಪಡೆದಿದ್ದಾರೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ಅಫ್ಗಾನಿಸ್ತಾನದ ಕಾನೂನು ವಿದ್ಯಾರ್ಥಿ ಸೈಯದ್‌ ಕುದ್ರತ್‌ ಹಾಶಿಮಿ 2 ಸ್ವರ್ಣ ಪದಕ ಪಡೆದಿದ್ದಾರೆ’ ಎಂದರು.

2021–22ನೇ ಬ್ಯಾಚ್‌ನ 28,581 ಅಭ್ಯರ್ಥಿಗಳಿಗೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುವುದು. 213 ಅಭ್ಯರ್ಥಿಗಳಿಗೆ 376 ಸ್ವರ್ಣಪದಕ, 214 ದತ್ತಿ ಬಹುಮಾನ, 157 ಅಭ್ಯರ್ಥಿಗಳಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಗುವುದು ಎಂದರು. ಕುಲಸಚಿವ (ಪರೀಕ್ಷಾಂಗ) ಪ್ರೊ.ಎ.ಪಿ. ಜ್ಞಾನಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.