ADVERTISEMENT

ಡ್ರಗ್ಸ್‌ ಪ್ರಕರಣ: ಎನ್‌ಸಿಬಿಯಿಂದ ನಟ ಸುಶಾಂತ್ ಸಿಂಗ್‌ ನೆರೆಮನೆಯಾತನ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2022, 7:34 IST
Last Updated 30 ಜನವರಿ 2022, 7:34 IST
ಸುಶಾಂತ್ ಸಿಂಗ್ ರಜಪೂತ್
ಸುಶಾಂತ್ ಸಿಂಗ್ ರಜಪೂತ್   

ಮುಂಬೈ: ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಡ್ರಗ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಸುಶಾಂತ್‌ ನೆರೆ ಮನೆಯಲ್ಲಿದ್ದ 31 ವರ್ಷದ ಸಾಹಿಲ್ ಶಾ ಅಕಾ ಫ್ಲಾಕೊ ಬಂಧಿತ ಆರೋಪಿಯಾಗಿದ್ದಾನೆ. ಖಚಿತ ಮಾಹಿತಿ ಆಧರಿಸಿ ಆರೋಪಿ ದುಬೈನಿಂದ ಮುಂಬೈಗೆ ಬಂದಿಳಿದ ಕೂಡಲೇ ಆತನನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.

ಸದ್ಯ ಬಂಧಿತ ಆರೋಪಿಯನ್ನು ಕಳೆದ ವರ್ಷ ಗಾಂಜಾ ವಶಪಡಿಸಿಕೊಂಡ ಪ್ರಕರಣ ಮತ್ತು 2020ರಲ್ಲಿ ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೊಳಪಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಸುಶಾಂತ್ ಸಿಂಗ್ ಅವರ ಸಾವು ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ಬಳಿಕ ಕಳೆದ 9 ತಿಂಗಳಿಂದ ಸಾಹಿಲ್​ ತಲೆಮರೆಸಿಕೊಂಡಿದ್ದ. ಎನ್​ಸಿಬಿ ಅಧಿಕಾರಿಗಳು ಈತನಿಗಾಗಿ ಶೋಧ ನಡೆಸಿದ್ದರು.

ಸಾಹಿಲ್‌, 2021ರ ಜೂನ್‌ನಲ್ಲಿ ತನ್ನನ್ನು ಬಂಧಿಸದಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಎನ್​ಸಿಬಿ ಅಧಿಕಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ಸಾಹಿಲ್​ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿತ್ತು.

ಸುಶಾಂತ್ ಸಿಂಗ್‌ಗೆ ಎಂ.ಎಸ್. ಧೋನಿ ಬಯೋಪಿಕ್ ಸಿನಿಮಾ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಆದರೆ, 2020ರ ಜೂನ್ 14ರಂದು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಸದ್ಯ ಸುಶಾಂತ್ ಸಾವು ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.