ADVERTISEMENT

ಡ್ರಗ್ಸ್ ಪ್ರಕರಣ: ಎನ್‌ಸಿಬಿ ವಿಚಾರಣೆಗೆ ಹಾಜರಾದ ದೀಪಿಕಾ ಪಡುಕೋಣೆ

ಏಜೆನ್ಸೀಸ್
Published 26 ಸೆಪ್ಟೆಂಬರ್ 2020, 7:15 IST
Last Updated 26 ಸೆಪ್ಟೆಂಬರ್ 2020, 7:15 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ಮುಂಬೈ: ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೆ ಸಂಬಂಧಿಸಿದ ಡ್ರಗ್ಸ್‌ ಪ್ರಕರಣದ ಕುರಿತು ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ವಿಚಾರಣೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶನಿವಾರ ಬೆಳಿಗ್ಗೆ ಹಾಜರಾದರು.

ದೀಪಿಕಾ ಅವರ ಉದ್ಯಮ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರನ್ನು ಎನ್‌ಸಿಬಿಯ ವಿಶೇಷ ತಂಡ ಶುಕ್ರವಾರ ವಿಚಾರಣೆಗೆ ಒಳಪಡಿಸಿತ್ತು. ಶುಕ್ರವಾರ ರಾತ್ರಿಯೇ ದೀಪಿಕಾ ಅವರು ಕಾನೂನು ಸಲಹೆಗಾರರನ್ನು ಭೇಟಿಯಾಗಿದ್ದರು.

ಕರಿಷ್ಮಾ ಪ್ರಕಾಶ್ ಅವರ ವಾಟ್ಸ್‌ಆ್ಯಪ್ ಸಂದೇಶಗಳಲ್ಲಿ ಡ್ರಗ್ಸ್‌ ವ್ಯವಹಾರಕ್ಕೆ ಸಂಬಂಧಿಸಿ ‘ಡಿ’ ಎಂಬ ವ್ಯಕ್ತಿ ಜತೆಗೆ ಸಂಬಾಷಣೆ ನಡೆದಿದೆ. ಆ ವ್ಯಕ್ತಿ ಯಾರು ಎಂಬುದನ್ನು ತಿಳಿಯಬೇಕಿದೆ ಎಂದು ಎನ್‌ಸಿಬಿ ಮೂಲಗಳು ಈ ಹಿಂದೆಯೇ ತಿಳಿಸಿವೆ.

ನಟಿಯರಾದ ಶ್ರದ್ಧಾ ಕಪೂರ್‌, ಸಾರಾ ಅಲಿಖಾನ್‌ ಸಹ ಇಂದು ಎನ್‌ಸಿಬಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ ನಿರೀಕ್ಷೆ ಇದೆ.

ಎನ್‌ಸಿಬಿ ಕಚೇರಿ ಎದುರು ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮಾಧ್ಯಮ ಸಿಬ್ಬಂದಿಯೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್‌, ಸಾರಾ ಅಲಿಖಾನ್‌ ಹಾಗೂ ರಕುಲ್‌ ಪ್ರೀತ್‌ ಸಿಂಗ್‌ ಅವರಿಗೆ ಇದೇ 23ರಂದು ಎನ್‌ಸಿಬಿ ಸಮನ್ಸ್ ಜಾರಿ ಮಾಡಿತ್ತು.

ವಿಚಾರಣೆ ವೇಳೆ ತಾವೂ ಹಾಜರಿರಬಹುದೇ ಎಂದು ದೀಪಿಕಾ ಪತಿ, ನಟ ರಣವೀರ್ ಸಿಂಗ್ ಮನವಿ ಮಾಡಿದ್ದರು ಎಂದು ವರದಿಯಾಗಿತ್ತು. ಆದರೆ, ಅಂತಹ ಯಾವುದೇ ಮನವಿ ಬಂದಿಲ್ಲ ಎಂದು ಬಳಿಕ ಎನ್‌ಸಿಬಿ ಸ್ಪಷ್ಟನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.