
ನಟಿ ನಿಧಿ ಅಗರ್ವಾಲ್
ಚಿತ್ರ: ಎಕ್ಸ್ ಖಾತೆ
ಡಾರ್ಲಿಂಗ್ ಪ್ರಭಾಸ್ ಹಾಗೂ ನಿಧಿ ಅಗರವಾಲ್ ನಟನೆಯ ಬಹು ನಿರೀಕ್ಷಿತ ‘ದಿ ರಾಜಾಸಾಬ್’ ಸಿನಿಮಾದ 2ನೇ ಹಾಡೊಂದು ನಿನ್ನೆ ಬುಧವಾರ (ಡಿಸೆಂಬರ್ 17) ಹೈದರಾಬಾದ್‌ನಲ್ಲಿ ಬಿಡುಗಡೆಯಾಗಿತ್ತು. ಈ ಹಾಡು ಬಿಡುಗಡೆ ಕಾರ್ಯಕ್ರಮಕ್ಕೆಂದು ಲುಲು ಮಾಲ್‌ಗೆ ನಟಿ ನಿಧಿ ಅಗರವಾಲ್ ಸೇರಿಂದರೆ ಇಡೀ ಚಿತ್ರತಂಡ ಹಾಜರಾಗಿತ್ತು.
ಹೈದರಾಬಾದ್‌ನ ಲುಲುಮಾಲ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸಹನಾ ಹಾಡನ್ನು ರಿಲೀಸ್ ಮಾಡಲಾಗಿತ್ತು. ಬಳಿಕ ಕಾರ್ಯಕ್ರಮ ಮುಗಿಸಿ ವಾಪಸ್ ಆಗುತ್ತಿದ್ದಾಗ ನಟಿ ನಿಧಿ ಅಗರವಾಲ್ ಮೇಲೆ ಅಭಿಮಾನಿಗಳು ಏಕಾಏಕಿ ಮುಗಿಬಿದ್ದಿದ್ದಾರೆ. ಈ ಕುರಿತ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ನಟಿ ಕಾರ್ಯಕ್ರಮ ಮುಗಿಸಿಕೊಂಡು ಕಾರ್‌ನತ್ತ ಮರಳುತ್ತಿದ್ದಾಗ ಏಕಾಏಕಿ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ನೆಪದಲ್ಲಿ ಮುತ್ತಿಕೊಂಡಿದ್ದಾರೆ. ಇದರಿಂದ ಸ್ವತಃ ನಟಿ ತೀವ್ರ ಮುಜುಗರದ ಜೊತೆ ಕಿರಿಕಿರಿ ಅನುಭವಿಸಿದ್ದಾರೆ. ಯುವಕರ ಗುಂಪಿನ ಮಧ್ಯೆ ಸಿಲುಕಿ ಹೊರಗಡೆ ಬರಲಾರದೆ ನಟಿ ಪರದಾಡಿದ್ದಾರೆ. ಇದೇ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹುಚ್ಚು ಅಭಿಮಾನಿಗಳ ಈ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇನ್ನು, ದಿ ರಾಜಾಸಾಬ್ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಿಧಿ ಅಗರವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್, ಸಂಜಯ್ ದತ್, ಜರೀನಾ ವಹಾಬ್, ಬೊಮನ್ ಇರಾನಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಎಸ್. ತಮನ್ ಸಂಗೀತ ಈ ಹಾರರ್ ಕಾಮಿಡಿ ಚಿತ್ರಕ್ಕಿದೆ. ಮಾರುತಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.