ADVERTISEMENT

ಆಸ್ಕರ್‌ ವಿಜೇತ ದಕ್ಷಿಣ ಕೊರಿಯಾ ಚಿತ್ರದ ವಿರುದ್ಧ ತಮಿಳು ಚಿತ್ರ ನಿರ್ಮಾಪಕನ ಕೇಸು?

ಚಿತ್ರದ ಕಥಾ ವಸ್ತು ಕದ್ದ ಆರೋಪ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 5:06 IST
Last Updated 15 ಫೆಬ್ರುವರಿ 2020, 5:06 IST
ಪ್ಯಾರಾಸೈಟ್‌ ಮತ್ತು ಮಿನ್‌ಸಾರ ಕಣ್ಣ ಚಿತ್ರದ ಪೋಸ್ಟರ್‌
ಪ್ಯಾರಾಸೈಟ್‌ ಮತ್ತು ಮಿನ್‌ಸಾರ ಕಣ್ಣ ಚಿತ್ರದ ಪೋಸ್ಟರ್‌   

ಚೆನ್ನೈ: ಈ ಬಾರಿಯ ಆಸ್ಕರ್‌ನಲ್ಲಿ ನಾಲ್ಕು ಪ್ರಶಸ್ತಿ ಪಡೆದುಕೊಂಡ ದಕ್ಷಿಣ ಕೊರಿಯಾದ ‘ಪ್ಯಾರಸೈಟ್‌’ ಚಿತ್ರದ ವಿರುದ್ಧ ಪ್ರಕರಣ ದಾಖಲಿಸಲು ತಮಿಳು ಚಿತ್ರ ನಿರ್ಮಾಪಕ ತೇನಪ್ಪನ್‌ ಅವರು ನಿರ್ಧರಿಸಿದ್ದಾರೆ.

‌‘ವಿಜಯ್‌ ನಟನೆಯ 1999ರ ಸಿನಿಮಾ ‘ಮಿನ್‌ಸಾರ ಕಣ್ಣಾ’ ಚಿತ್ರದ ಕಥಾವಸ್ತುವನ್ನು ಪ್ಯಾರಸೈಟ್‌ ಒಳಗೊಂಡಿದೆ. ಇದರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದ್ದೇನೆ’ ಎಂದು ತೇನಪ್ಪನ್‌ ಅವರು ತಿಳಿಸಿದ್ದಾರೆ.

‘ಪ್ರಕರಣ ದಾಖಲಿಸಲು ಅಂತಾರಾಷ್ಟ್ರೀಯ ನ್ಯಾಯವಾದಿಗಳ ನೆರವು ಪಡೆಯಲಾಗುವುದು. ‘ಪ್ಯಾರಾಸೈಟ್‌’ ಸಿನಿಮಾದ ಕಥಾ ಹಂದರ ‘ಮಿನ್‌ಸಾರ ಕಣ್ಣಾ’ ಸಿನಿಮಾದ್ದಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

2020ನೇ ಸಾಲಿನ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಇತ್ತೀಚೆಗಷ್ಟೇ ಪ್ರಕಟವಾಗಿತ್ತು. ‘ಪ್ಯಾರಸೈಟ್’ ಸಿನಿಮಾದ ನಿರ್ದೇಶಕ ಬಾಂಗ್‌ ಜೂನ್ ಹೂ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ. ಇನ್ನುಳಿದಂತೆ ಉತ್ತಮ ಚಿತ್ರ, ಉತ್ತಮ ವಿದೇಶ ಭಾಷೆ ಚಿತ್ರ, ಉತ್ತಮ ಚಿತ್ರಕತೆ ವಿಭಾಗದಲ್ಲಿಯೂ ಪ್ಯಾರಾಸೈಟ್‌ಗೆ ಪ್ರಶಸ್ತಿ ಸಿಕ್ಕಿತ್ತು.

ಇನ್ನು 1999ರಲ್ಲಿ ಬಿಡುಗಡೆಯಾದ ವಿಜಯ್‌ ಅವರ ನಾಯಕತ್ವದ ತಮಿಳಿನ ‘ಮಿನ್‌ಸಾರ ಕಣ್ಣಾ’ ಸಿನಿಮಾದ ಮೇಲೆ ನಿರ್ಮಾಪಕ ತೇನಪ್ಪನ್‌ ಹಕ್ಕುಸ್ವಾಮ್ಯ ಹೊಂದಿದ್ದಾರೆ.

‘ಮಿನ್‌ಸಾರ ಕಣ್ಣಾ’ ಕಥಾ ವಸ್ತು

ಪುರುಷ ವಿರೋಧಿ ಮಹಿಳಾ ಉದ್ಯಮಿ ಇಂದಿರಾ ದೇವಿ ಎಂಬುವವರು ತಮ್ಮ ಸುತ್ತಲೂ ಮಹಿಳಾ ಸಿಬ್ಬಂದಿಯನ್ನೇ ನೇಮಿಸಿಕೊಂಡಿರುತ್ತಾರೆ. ಆಕೆಯ ಪುರಷ ವಿರೋಧಿ ಧೋರಣೆಯ ಹಿಂದೆ ಪ್ರೇಮ ವೈಫಲ್ಯ, ವಂಚನೆ ಅಡಗಿರುತ್ತದೆ. ಪುರುಷನ ವಿರುದ್ಧದ ಆಕೆಯ ಎಲ್ಲ ಕಲ್ಪನೆಗಳನ್ನೂ ಮೀರಿ, ಮನವೊಲಿಸಿ ಆಕೆಯ ಸೋದರಿಯನ್ನೇ ನಾಯಕ ಕಣ್ಣನ್‌ ವಿವಾಹವಾಗುವುದು ಮಿನ್‌ಸಾರ ಕಣ್ಣ ಚಿತ್ರದ ಕಥಾವಸ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.