
ನಟ ಧರ್ಮೇಂದ್ರ
ಚಿತ್ರ: ಪ್ರಜಾವಾಣಿ
2026ನೇ ಸಾಲಿನ ಮರಣೋತ್ತರ 'ಪದ್ಮವಿಭೂಷಣ' ಪ್ರಶಸ್ತಿಗೆ ಭಾಜನರಾದ ಧರ್ಮೇಂದ್ರ ಅವರು ‘ಜೀವಂತವಾಗಿದ್ದಾಗಲೇ ಪ್ರಶಸ್ತಿ ಪಡೆಯಬೇಕಿತ್ತು‘ ಎಂದು ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕರಾದ ಅನಿಲ್ ಶರ್ಮಾ ಹೇಳಿದ್ದಾರೆ.
ಖ್ಯಾತ ಸಿನಿಮಾ ನಿರ್ದೇಶಕ ಅನಿಲ್ ಶರ್ಮ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಧರ್ಮೇಂದ್ರ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರ ಫೋಟೊವನ್ನು ಹಂಚಿಕೊಂಡು 'ಪ್ರತಿಯೊಬ್ಬ ಅಭಿಮಾನಿಗೂ ಹೃತ್ಪೂರ್ವಕ ಅಭಿನಂದನೆಗಳು' ಎಂದು ಅಡಿಬರಹ ನೀಡಿದ್ದಾರೆ.
‘ಧರ್ಮೇಂದ್ರ ಅವರಿಗೆ ಪದ್ಮವಿಭೂಷಣ ಲಭಿಸಿರುವುದು ಅವರ ಪ್ರತಿ ಅಭಿಮಾನಿಗೂ ಹೆಮ್ಮೆಯಾಗಿದೆ. ಈ ಪುರಸ್ಕಾರ ಅವರು ಬದುಕಿದ್ದಾಗಲೇ ಬಂದಿದ್ದರೆ, ಇನ್ನೂ ಹೆಚ್ಚು ಸಂತೋಷವಾಗುತ್ತಿತ್ತು. ಆದರೂ ಸತ್ಯ ಉಳಿದಿದೆ. ಕೆಲವು ವ್ಯಕ್ತಿಗಳು ಪ್ರಶಸ್ತಿಗಳನ್ನು ಮೀರಿ ಮೇಲೇರುತ್ತವೆ’ ಎಂದು ಬರೆದಿದ್ದಾರೆ.
’ಧರ್ಮೇಂದ್ರ ಅವರು ತಮ್ಮ ನಟನೆಯಿಂದ ಗಳಿಸಿದ ಪ್ರೀತಿ, ಗೌರವ ಹಾಗೂ ಮೆಚ್ಚುಗೆ ಯಾವುದೇ ಬಿರುದು, ಪದಕ ಮತ್ತು ಪ್ರಶಸ್ತಿಗಿಂತ ಬಹಳ ದೊಡ್ಡದು’ ಎಂದು ಹೇಳಿದ್ದಾರೆ.
60 ವರ್ಷಗಳಿಗೂ ಹೆಚ್ಚು ಕಾಲ ವೃತ್ತಿ ಜೀವನ ನಡೆಸಿದ ಧರ್ಮೇಂದ್ರ ಅವರು 2025ರ ನವೆಂಬರ್ 24ರಂದು ನಿಧನರಾದರು. ‘ಸತ್ಯಕಂ’, ’ಜಾನಿ ಗದ್ದರ್’, ‘ಗುಡ್ಡಿ’, ‘ಶೋಲೆ’ ಮತ್ತು ‘ಇಕ್ಕಿಸ್’ ಸೇರಿದಂತೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಧರ್ಮೇಂದ್ರ ಅವರ ಕೊನೆ ಸಿನಿಮಾ ‘ಇಕ್ಕೀಸ್’ ಜನವರಿ 1ರಂದು ಬಿಡುಗಡೆಯಾಯಿತು. ಈ ಸಿನಿಮಾವನ್ನು ಶ್ರೀರಾಮ್ ರಾಘವನ್ ನಿರ್ದೇಶನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.